ಪ್ರಯಾಗರಾಜ (ಉತ್ತರ ಪ್ರದೇಶ) ಇಲ್ಲಿನ ಘಟನೆ
ಪ್ರಯಾಗರಾಜ (ಉತ್ತರ ಪ್ರದೇಶ) – ಪ್ರಯಾಗರಾಜ ಜಿಲ್ಲೆಯ ಗೌಘಾಟ್ ಪ್ರದೇಶದಲ್ಲಿರುವ ಖಸಲಾ ಆಶ್ರಮದ ದೇವಸ್ಥಾನದಿಂದ ಮೂರ್ತಿ ಕದ್ದ ಕಳ್ಳನು ಮೂರ್ತಿಯನ್ನು ಅಕ್ಟೋಬರ್ 1 ರಂದು ಸ್ವತಃ ತಾನೇ ಗುಟ್ಟಾಗಿ ಮರಳಿಸಿದನು. ಕಳ್ಳನು ಮೂರ್ತಿಯೊಂದಿಗೆ ಕ್ಷಮಾಪಣೆ ಪತ್ರವನ್ನು ಇಟ್ಟಿದ್ದನು. ಈಗ ಈ ಮೂರ್ತಿಯನ್ನು ಪುನಃ ದೇವಸ್ಥಾನದಲ್ಲಿ ವಿಧಿವತ್ತಾಗಿ ಸ್ಥಾಪಿಸಲಾಗುತ್ತಿದೆ.
ಈ ಆಶ್ರಮದಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನದ ಗರ್ಭಗುಡಿಯಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ರಾಧಾ-ಕೃಷ್ಣರ ಅಷ್ಟಧಾತು ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಅದು ಸೆಪ್ಟೆಂಬರ್ 23 ರಂದು ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಲ್ಲಿ ದೂರು ದಾಖಲಿಸಲಾಗಿತ್ತು. ಮೂರ್ತಿ ಕಳ್ಳತನವಾಗಿದ್ದರಿಂದ ದುಃಖಿತರಾಗಿದ್ದ ಮಹಂತ್ ಜೈರಾಮ್ ದಾಸ್ ಇವರು ಆಹಾರವನ್ನು ತ್ಯಜಿಸಿದ್ದರು. ಆಶ್ರಮದ ಇತರರೂ ದುಃಖಿತರಾಗಿದ್ದರು. ತದನಂತರ ಅಕಸ್ಮಿಕವಾಗಿ ಅಕ್ಟೋಬರ್ 1 ರಂದು ಬೆಳಿಗ್ಗೆ ದೇವಸ್ಥಾನದ ಬಳಿ ಕಳ್ಳನು ಮೂರ್ತಿಯನ್ನು ಇಟ್ಟನು. ಮೂರ್ತಿಯೊಂದಿಗೆ ಕಳ್ಳನು ಮಹಂತರನ್ನು ಉದ್ದೇಶಿಸಿ ಕ್ಷಮಾಪಣೆಯ ಪತ್ರವನ್ನು ಇಟ್ಟಿದ್ದನು. ಪತ್ರದಲ್ಲಿ ಅವನು, ನನ್ನ ಪುತ್ರನ ಆರೋಗ್ಯ ಹದಗೆಟ್ಟಿದೆ. ಸ್ವಲ್ಪ ಹಣಕ್ಕಾಗಿ ನಾನು ಬಹಳ ಹೊಲಸು ಕೆಲಸ ಮಾಡಿದ್ದೇನೆ. ಮೂರ್ತಿಯನ್ನು ಮಾರಾಟ ಮಾಡಲು ನಾನು ಬಹಳ ಪ್ರಯತ್ನಿಸಿದೆನು. ನನ್ನ ತಪ್ಪಿಗಾಗಿ ಕ್ಷಮೆಯಾಚಿಸುತ್ತಾ, ನಾನು ಮೂರ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ನನ್ನನ್ನು ಕ್ಷಮಿಸಿರಿ ಮತ್ತು ಮೂರ್ತಿಯನ್ನು ಪುನಃ ದೇವಸ್ಥಾನದಲ್ಲಿ ಸ್ಥಾಪಿಸಿರಿ. ನನ್ನ ಪುತ್ರನನ್ನು ಕ್ಷಮಿಸಿರಿ ಮತ್ತು ನಿಮ್ಮ ಮೂರ್ತಿಯನ್ನು ಸ್ವೀಕರಿಸಿರಿ ಎಂದು ವಿನಂತಿಸಿದ್ದಾನೆ.