ಇನ್ನು ಮುಂದೆ ಭಕ್ತರಿಗಾಗಿ ಕೈಲಾಸ ಪರ್ವತದ ದರ್ಶನಕ್ಕೆ ಹೆಲಿಕಾಪ್ಟರ್ ಬಳಕೆ !

ಡೆಹರಾಡೂನ್ – ಉತ್ತರಖಂಡದ ಪಿಥೌರಾಗಢ ಜಿಲ್ಲೆಯಲ್ಲಿನ ಹಳೆ ಲಿಪುಲೇಖದ ಬೆಟ್ಟಗಳಿಂದ ಮುಂದಿನ ವಾರದಿಂದ ‘ಎಂ.ಐ.- ೧೭’ ಹೆಲಿಕಾಪ್ಟರ್ ಮೂಲಕ ಕೈಲಾಸ ಪರ್ವತದ ದರ್ಶನ ಆರಂಭವಾಗುವುದು. ಈ ಪ್ರವಾಸಕ್ಕಾಗಿ ೭೫ ಸಾವಿರ ರೂಪಾಯಿ ಖರ್ಚಾಗುವುದು.

೧. ಕೈಲಾಸ ಪರ್ವತ ಚೀನಾದ ವಶದಲ್ಲಿರುವ ಟಿಬೆಟ್ ನಲ್ಲಿ ಇದೆ. ಕೈಲಾಸದ ದರ್ಶನ ಪಡೆಯುವ ಸ್ಥಳ ೧೪ ಸಾವಿರ ಅಡಿಗಿಂತಲೂ ಹೆಚ್ಚು ಎತ್ತರವಿದೆ. ಆದ್ದರಿಂದ ೫೫ ವರ್ಷದವರೆಗಿನ ವ್ಯಕ್ತಿಗಳಿಗೆ ಪ್ರಯಾಣದ ಅನುಮತಿ ಇರಲಿದೆ.

೨. ಈ ಹಿಂದೆ ಭಾರತೀಯರು ೩ ಮಾರ್ಗದಿಂದ ಕೈಲಾಸ ಪರ್ವತ ತಲುಪಲು ಸಾಧ್ಯವಾಗಿತ್ತು. ಮೊದಲನೆಯದು ನೇಪಾಳ ಮಾರ್ಗವಾಗಿ, ಎರಡನೆಯದು ಲಿಪುಲೇಖ ಮಾರ್ಗವಾಗಿ ಮತ್ತು ಮೂರನೇದು ಸಿಕ್ಕಿಂ ಮಾರ್ಗವಾಗಿ ಇತ್ತು. ಈ ಮಾರ್ಗಗಳಲ್ಲಿ ೧೧ ರಿಂದ ೨೨ ದಿನಗಳಲ್ಲಿ ಪ್ರಯಾಣ ಪೂರ್ಣವಾಗುತ್ತದೆ ಮತ್ತು ಅದಕ್ಕಾಗಿ ೧ ಲಕ್ಷ ೬ ಸಾವಿರ ದಿಂದ ೨ ಲಕ್ಷ ೫೦ ಸಾವಿರದವರೆಗೆ ಖರ್ಚು ಆಗುತ್ತಿತ್ತು.

೩. ಹೊಸ ಮಾರ್ಗದ ಪ್ರಕಾರ ಭಕ್ತರ ಯಾತ್ರೆ ಪಿಥೌರಾಗಢದಿಂದ ಆರಂಭವಾಗುವುದು. ಮೊದಲು ಅಲ್ಲಿಂದ ಸೈನ್ಯದ ‘ಎಂ.ಐ.-೧೭’ ಹೆಲಿಕಾಪ್ಟರ್ ಒಂದೇ ಬಾರಿಗೆ ೧೫ ಭಕ್ತರನ್ನು ಜುನಾ ಲಿಪುಲೇಖಕ್ಕೆ ೩೦ ಕಿಲೋಮೀಟರ್ ಅಂತರದಲ್ಲಿರುವ ಗುಂಜಿ ಗ್ರಾಮಕ್ಕೆ ಕರೆದುಕೊಂಡು ಹೋಗುವುದು. ಅಲ್ಲಿರುವ ವಾಹನಗಳು ಭಕ್ತರಿಗೆ ೨೧ ಕಿಲೋಮೀಟರ್ ಮುಂದೆ ನಾಭಿಡಂದವರೆಗೆ ಕರೆದುಕೊಂಡು ಹೋಗುವುದು. ಅಲ್ಲಿ ಮೊದಲು ಓಂ ಪರ್ವತ ನೋಡಬಹುದು. ಬಳಿಕ ಭಾರತೀಯ ಸೈನ್ಯದ ಸೈನಿಕರು ೯ ಕಿಲೋಮೀಟರ್ ಮುಂದೆ ಹಳೆಯ ಲಿಪುಲೇಖದ ಖಿಂಡಿಯವರೆಗೆ ಕರೆದುಕೊಂಡು ಹೋಗುವರು. ಅಲ್ಲಿ ಭಕ್ತರು ಶಿಖರದ ಮೇಲೆ ಕಟ್ಟಿರುವ ‘ದೃಶ್ಯಬಿಂದು’ವಿನಿಂದ ಕೈಲಾಸ ಪರ್ವತ ದರ್ಶನ ಮಾಡುವರು.

೪. ಈ ಯಾತ್ರೆ ೪ ದಿನಗಳದ್ದಾಗಿದೆ. ಈ ಯಾತ್ರೆಗಾಗಿ ಭಕ್ತರಿಗೆ ತಲಾ ೭೫ ಸಾವಿರ ರೂಪಾಯಿ ಖರ್ಚು ಮಾಡಬೇಕಾಗುವುದು. ಅದರಲ್ಲಿ ಹೆಲಿಕಾಪ್ಟರ್ – ಜೀಪ್ ಗಳ ಬಾಡಿಗೆ, ವಸತಿ, ಭೋಜನ, ಬಿಸಿನೀರು, ರಜಾಯಿ ಹಾಸಿಗೆ ಮುಂತಾದವು ಒಳಗೊಂಡಿದೆ.