ನವ ದೆಹಲಿ – ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದು, ಅವರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಅತಿಶಿ ಸಿಂಗ್ ದೆಹಲಿಯ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣ ವಚನ ಇದೇ ವಾರ ನಡೆಯಲಿದೆ. ಸೆಪ್ಟೆಂಬರ್ 26 ಮತ್ತು 27 ರಂದು 2 ದಿನಗಳ ವಿಧಾನಸಭೆಯ ಅಧಿವೇಶನ ಕರೆಯಲಾಗಿದೆ.
ಸೆಪ್ಟೆಂಬರ್ 13 ರಂದು, ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ನಾನು ಪ್ರಾಮಾಣಿಕನೋ ಅಥವಾ ಅಪ್ರಾಮಾಣಿಕನೋ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಹೇಳಿದ್ದರು. ಜನತೆ ಈ ಕಳಂಕವನ್ನು ತೊಳೆದು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದರೆ ಮತ್ತೆ ನಾನೇ ಮುಖ್ಯಮಂತ್ರಿಯಾಗಿ ಕೂರುತ್ತೇನೆ.
ಭಯೋತ್ಪಾದಕ ಮಹಮ್ಮದ್ ಅಫ್ಜಲ್‌ಗಾಗಿ ಹೋರಾಡಿದ ಅತಿಶಿ ಕುಟುಂಬ ! – ಸ್ವಾತಿ ಮಲಿವಾಲ್
ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಾತನಾಡಿ, ಭಯೋತ್ಪಾದಕ ಮೊಹಮ್ಮದ್ ಅಫ್ಜಲ್‌ಗಾಗಿ ಹೋರಾಡಿದ ಅತಿಶಿ ಕುಟುಂಬದವರನ್ನು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದೇವರು ದೆಹಲಿಯನ್ನು ಕಾಪಾಡಲಿ. ಇಂದು ದೆಹಲಿಗೆ ಅತ್ಯಂತ ದುಃಖದ ದಿನವಾಗಿದೆ ಎಂದು ಹೇಳಿದರು.