Terrorism Last Breath in J&K : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಅಂತಿಮ ಕ್ಷಣವನ್ನು ಎಣಿಸುತ್ತಿದೆ ! – ಪ್ರಧಾನಿ

ದೋಡಾ (ಜಮ್ಮು – ಕಾಶ್ಮೀರ) : ಜಮ್ಮು-ಕಾಶ್ಮೀರದಲ್ಲಿ ಹಗಲು ರಾತ್ರಿ ಯಾವುದೇ ಸಮಯದಲ್ಲಿ ಅಘೋಷಿತ ಕರ್ಫ್ಯೂ ಜಾರಿಯಲ್ಲಿರುತ್ತಿತ್ತು. ಅಲ್ಲಿನ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ ಅಂದಿನ ಕಾಂಗ್ರೆಸ್ ಸರಕಾರದ ಗೃಹ ಸಚಿವರು ಕೂಡ ಕಾಶ್ಮೀರದ ಲಾಲ್ ಚೌಕ್‌ಗೆ ಹೋಗಲು ಹೆದರುತ್ತಿದ್ದರು. ಕಳೆದ 10 ವರ್ಷಗಳಲ್ಲಿ ಈ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಈಗ ತನ್ನ ಅಂತಿಮ ಕ್ಷಣವನ್ನು ಎಣಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಜಮ್ಮು-ಕಾಶ್ಮೀರ ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ಮೋದಿಯವರ ಮೊದಲ ಸಭೆ ಇದಾಗಿದೆ. ಈ ಹಿನ್ನೆಲೆಯಲ್ಲಿ ದೋಡಾದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಪ್ರಧಾನಮಂತ್ರಿಯವರು ತಮ್ಮ ಮಾತನ್ನು ಮುಂದುವರಿಸಿ,

1. ಹಿಂದೆ ಸೈನಿಕರ ಮೇಲೆ ಕಲ್ಲುಗಳನ್ನು ಎಸೆಯಲಾಗುತ್ತಿತ್ತು, ಈಗ ಅದೇ ಕಲ್ಲುಗಳಿಂದ ಜಮ್ಮು-ಕಾಶ್ಮೀರದಲ್ಲಿ ನವ ನಿರ್ಮಾಣದ ಕಾರ್ಯ ನಡೆಯುತ್ತಿದೆ.
2. ಕಾಂಗ್ರೆಸ್, ನ್ಯಾಷನಲ್ ಕಾಂಗ್ರೆಸ್ ಮತ್ತು ಪಿಡಿಪಿ ಈ ಮೂರು ಕುಟುಂಬಗಳು ಸೇರಿ ಜಮ್ಮು-ಕಾಶ್ಮೀರವನ್ನು ನಾಶಪಡಿಸಿದವು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಈ ಮೂರು ಕುಟುಂಬಗಳ ವಿರುದ್ಧ ಯುವಕರು ನಿಂತಿದ್ದಾರೆ.
3. ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಯಾವುದೇ ಜಾತಿ ಮತ್ತು ಧರ್ಮದ ಯಾವುದೇ ವ್ಯಕ್ತಿಯ ಹಕ್ಕುಗಳ ರಕ್ಷಣೆಯು ಭಾಜಪದ ಆದ್ಯತೆಯಾಗಿದೆ.

ದೋಡಾದಲ್ಲಿ 40 ವರ್ಷಗಳ ನಂತರ ಮೊದಲ ಬಾರಿಗೆ ಪ್ರಧಾನಿ ಸಭೆ

ದೋಡಾದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಗಳ ಸಭೆ ನಡೆಯುತ್ತಿದೆಯೆಂದು ಭಾಜಪ ಜಮ್ಮು-ಕಾಶ್ಮೀರ ಚುನಾವಣಾ ಮುಖಂಡರಾದ ಕಿಶನ್ ರೆಡ್ಡಿ ತಿಳಿಸಿದರು. ಈ ಹಿಂದೆ 1982ರಲ್ಲಿ ಪ್ರಧಾನಿಗಳ ಸಭೆ ನಡೆದಿತ್ತು.

ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ, ಅಕ್ಟೋಬರ್ 8 ರಂದು ಫಲಿತಾಂಶ !

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯು ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಹೀಗೆ 3 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ದೋಡಾದ 3 ಜಿಲ್ಲೆಗಳಲ್ಲಿನ 8 ಮತಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅದೇ ದಿನದಂದು ಕಾಶ್ಮೀರದ 16 ಕ್ಷೇತ್ರಗಳಲ್ಲಿಯೂ ಸಹ ಮತದಾನ ನಡೆಯಲಿದೆ. ಭಾಜಪ ನಾಯಕ ಗಜಯ್ ಸಿಂಗ್ ರಾಣಾ ಅವರು ದೋಡಾದಿಂದ ನಾಮಪತ್ರ ಸಲ್ಲಿಸಿದ್ದು, ಶಕ್ತಿ ರಾಜ್ ಪರಿಹಾರ ದೋಡಾ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 8 ರಂದು ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.