Gyanvapi Case : ಜ್ಞಾನವಾಪಿಯ ನೆಲಮಾಳಿಗೆ ದುರಸ್ತಿಯ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ !

ವಾರಣಾಸಿ – ಜ್ಞಾನವಾಪಿ ಪ್ರದೇಶದಲ್ಲಿನ ವ್ಯಾಸ್ಜಿ ನೆಲಮಾಳಿಗೆಯ ಮೇಲ್ಛಾವಣಿಯ ಮೇಲೆ ನಮಾಜ್ ಮಾಡುವುದಕ್ಕಾಗಿ ಬರುವ ಮುಸ್ಲಿಮರ ಪ್ರವೇಶವನ್ನು ನಿಲ್ಲಿಸಬೇಕು ಮತ್ತು ನೆಲಮಾಳಿಗೆ ರಿಪೇರಿ ಮಾಡಲು ಹಿಂದೂಗಳು ಸಲ್ಲಿಸಿದ್ದ ಮನವಿಯನ್ನು ವಾರಣಾಸಿಯ ಕಿರಿಯ ನ್ಯಾಯಾಲಯವು (ಸಿವಿಲ್ ಕೋರ್ಟ್) ತಿರಸ್ಕರಿಸಿದೆ. ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆ ಎಂದಿನಂತೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ. ಹಿಂದೂಗಳ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಹಿತೇಶ್ ಅಗರ್ವಾಲ್ ಅವರು ಮುಸಲ್ಮಾನರ ಕಡೆಯಿಂದ ಎತ್ತಿರುವ ಆಕ್ಷೇಪಣೆ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಸವಾಲು ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯವನ್ನು ನೀಡಿದ್ದಾರೆ.

ಜ್ಞಾನವಾಪಿ ಸಂಕುಲದ ಧಾರ್ಮಿಕ ವಿವಾದದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಈ ವಿಚಾರವಾಗಿ ಹಿಂದೂ – ಮುಸಲ್ಮಾನರ ಪಕ್ಷಗಳ ನಡುವೆ ದೀರ್ಘಕಾಲದಿಂದ ಕಾನೂನು ಹೋರಾಟ ನಡೆಯುತ್ತಿದೆ. ಈಗ ಹಿಂದೂ ಪಕ್ಷವು ನೆಲಮಾಳಿಗೆಯ ದುರಸ್ತಿ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ.