‘ಡಾಕ್ಟರೇ, ನನ್ನ ‘ಶೆಲ್ಫ್’ನಲ್ಲಿ (ಸಾಮಾನು ಇಡುವ ಹಲಗೆಯ ಮೇಲೆ) ಹೊಟ್ಟೆ ಸ್ವಚ್ಛಗೊಳಿಸುವ ವಿವಿಧ ಔಷಧಿಗಳ ಡಬ್ಬಿಗಳಿವೆ; ಆದರೆ ಅವುಗಳಲ್ಲಿ ಯಾವುದೇ ಔಷಧಿಯಿಂದ ನನ್ನ ಹೊಟ್ಟೆ ಚೆನ್ನಾಗಿ ಸ್ವಚ್ಛವಾಗಿ ಹಗುರವೆನಿಸುವುದಿಲ್ಲ !’, ಈ ಸಂಭಾಷಣೆ ಅಥವಾ ವಾಕ್ಯ ಎಲ್ಲರಿಗೂ ಕೊಂಚ ಮಟ್ಟಿಗೆ ಅನ್ವಯಿಸುವಷ್ಟು ಸಾಮಾನ್ಯವಾಗಿದೆ. ವರ್ಷಾನುಗಟ್ಟಲೇ ಹಗುರತನ ಅರಿವಾಗದ ಕಾರಣ ಬೆಳಗ್ಗೆ ಆಲಸ್ಯ, ನಿದ್ದೆ, ಹೊಟ್ಟೆಯಲ್ಲಿ ಜಡತ್ವ, ಕೆಲಸದ ಮತ್ತು ವ್ಯಾಯಾಮದ ಉತ್ಸಾಹ ಇಲ್ಲದಿರುವುದು ಮತ್ತು ನಂತರ ಉದ್ಭವಿಸುವ ವಿವಿಧ ಕಾಯಿಲೆಗಳು (ಇವು ಪರಸ್ಪರ ಸಂಬಂಧಿಸಿವೆ ಎಂದು ಸಹ ನಮಗೆ ಗೊತ್ತಿರುವುದಿಲ್ಲ) ಇದು ಬಹಳ ಸಾಮಾನ್ಯವಾಗಿದೆ. ಅದಕ್ಕೆ ವೈದ್ಯಕೀಯ ವ್ಯವಸಾಯವನ್ನು ಮಾಡುತ್ತಿರುವಾಗ ನನ್ನ ಗಮನಕ್ಕೆ ಬಂದ ಕೆಲವು ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.
೧. ಹೊಟ್ಟೆ ಸ್ವಚ್ಛವಾಗದ ಕಾರಣ ಮಲ ಕಲ್ಲುಗಳಂತೆ ಗಟ್ಟಿಯಾಗುವುದು, ಅಂಟಂಟಾಗುವುದು, ಪ್ರತಿದಿನ ಮಲದ ಸಂವೇದನೆ ಬರದಿರುವುದು; ಸಂವೇದನೆ ಬಂದರೂ ಸಂಪೂರ್ಣ ಸ್ವಚ್ಛ ಆಗದಿರುವುದರಿಂದ ೨-೩ ಬಾರಿ ಹೋಗಬೇಕಾಗುವುದು, ಹೀಗೆ ವಿವಿಧ ಸಮಸ್ಯೆಗಳು ಕಂಡುಬರುತ್ತವೆ. ಇವೆಲ್ಲವುಗಳಿಗೆ ಕೇವಲ ಒಂದು ಮತ್ತು ರಾತ್ರಿ ಹೊಟ್ಟೆ ಸ್ವಚ್ಛವಾಗುವ ಔಷಧಿಗಳನ್ನು ತೆಗೆದುಕೊಂಡರೂ ಸಂಪೂರ್ಣ ಪರಿಣಾಮ ಕಂಡು ಬರುವುದಿಲ್ಲ.
೨. ಅಂಟಂಟಾಗಿರುವ ಅಸಮಾಧಾನಕರ ಮಲವಿಸರ್ಜನೆ ಮತ್ತು ಜಡತ್ವವಿರುವಾಗ ಪಥ್ಯಾಹಾರ ಮತ್ತು ವ್ಯಾಯಾಮ ಆವಶ್ಯಕ ! ‘ಪಾಚನ’ ಹೆಸರಿನ ಆಯುರ್ವೇದದ ಸಂಕಲ್ಪನೆಯನ್ನು ಬಳಸಿ ಪಾಚಕ ಔಷಧಿಗಳ ಬಳಕೆ ಮಾಡುವ ಆವಶ್ಯಕತೆಯಿದೆ.
೩. ವಾಹನದಲ್ಲಿ ಬಹಳ ಪ್ರವಾಸ ಅಥವಾ ಯಾವಾಗಲೂ ಕುಳಿತುಕೊಂಡು ಮಾಡುವ ಕೆಲಸ ಇದ್ದರೆ, ಮಲ ಕಲ್ಲಿನಂತೆ ಗಟ್ಟಿಯಾಗುವುದು ಮತ್ತು ಪಿತ್ತದ ತೊಂದರೆ ಇರುವಾಗ ಮೂಲವ್ಯಾಧಿ/ಫಿಶರ್ ಆಗುವ ಅಪಾಯ ಜಾಸ್ತಿಯಿರುತ್ತದೆ. ಇಂತಹವರು ಕೇವಲ ತ್ರಿಫಲಾ/ಸೋನಾಮುಖಿ ಇವುಗಳಂತಹ ಹೊಟ್ಟೆ ಸ್ವಚ್ಛವಾಗುವ ಔಷಧಿಗಳನ್ನು ನಿರಂತರವಾಗಿ ಸೇವಿಸಿದರೆ ಕರುಳುಗಳ ‘ಟೋನ್’ (ಸ್ಥಿತಿಸ್ಥಾಪಕತ್ವ) ಕೆಡುವ ಮತ್ತು ಶುಷ್ಕತೆ ಹೆಚ್ಚಾಗಿ ‘ಫಿಶರ್’ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ವೈದ್ಯಕೀಯ ಸಲಹೆಗನುಸಾರ ೨-೩ ವಿಧಗಳ ಔಷಧಿಗಳನ್ನು ತುಪ್ಪದೊಂದಿಗೆ ಸೇವಿಸುವ ಆವಶ್ಯಕತೆ ಇರುತ್ತದೆ. ಆದುದರಿಂದಲೇ ಇಂತಹ ಸಮಯದಲ್ಲಿ ‘ಒವರ್ ದಿ ಕೌಂಟರ್’ (ವೈದ್ಯರ ಸಲಹೆ ಪಡೆಯದೇ ಅಥವಾ ಅವರ ಚೀಟಿ ಇಲ್ಲದೇ ಔಷಧಿಗಳ ಅಂಗಡಿಗಳಿಂದ ತೆಗೆದುಕೊಳ್ಳಲಾಗುವ ಔಷಧಿ) ಔಷಧಿಗಳು ಕೆಲಸ ಮಾಡುವುದಿಲ್ಲ.
೪. ಅವಶ್ಯಕತೆಗಿಂತ ಹೆಚ್ಚು ಸಲಾಡ್, ಒಣ ತಿಂಡಿಗಳ ಸೇವನೆಯನ್ನು ತಡೆಗಟ್ಟಬೇಕು, ಹಾಗೆಯೇ ಎಲ್ಲ ಹಂತಗಳಲ್ಲಿ ಯೋಗಾಸನಗಳು ಮತ್ತು ವ್ಯಾಯಾಮಗಳು ಅತ್ಯಾವಶ್ಯಕ. ಅವುಗಳ ಪ್ರಮಾಣವನ್ನು ನಮಗೆ ಸಾಧ್ಯವಾಗುವಷ್ಟು ಮತ್ತು ಸಹಿಸುವಷ್ಟು ಹೆಚ್ಚಿಸಬೇಕು.
೫. ಕಮೋಡ್ ಬಳಸುವುದಕ್ಕಿಂತ ಭಾರತೀಯ ಪದ್ಧತಿಯ ಪಾಯಖಾನೆ (ಸ್ಕ್ವೆಟಿಂಗ್ ಸ್ಟೂಲ್) ಆದಷ್ಟು ಬಳಸಬೇಕು, ಇದರಿಂದ ಕರುಳು ಗುದದ್ವಾರದ ಸರಳ ರೇಖೆಯಲ್ಲಿ ಬಂದು ಮಲವು ಸುಲಭವಾಗಿ ಹೊರಗೆ ಬರಲು ಸಹಾಯವಾಗುತ್ತದೆ.
೬. ವಾಹನದಲ್ಲಿ ಹೆಚ್ಚು ಪ್ರಯಾಣಿಸುವುದಿದ್ದರೆ ಆಹಾರದಲ್ಲಿ ತುಪ್ಪವನ್ನು ಯೋಗ್ಯವಾಗಿ ಬಳಸಬೇಕು. ಶೌಚ ಕಲ್ಲಿನಂತೆ ಗಟ್ಟಿಯಾಗುತ್ತಿದ್ದರೆ ನಿಮ್ಮ ವೈದ್ಯರೊಂದಿಗೆ ಸ್ನೇಹಪಾನ/ಬಸ್ತಿ ಇವುಗಳ ಬಗ್ಗೆ ಚರ್ಚಿಸಬೇಕು.
ಜಠರಾಗ್ನಿ ವ್ಯವಸ್ಥಿತವಾಗಿರುವುದರ ಆವಶ್ಯಕತೆ !
ಹೊಟ್ಟೆ ಸರಿಯಾಗಿದ್ದರೆ, ಜಠರಾಗ್ನಿಯು ವ್ಯವಸ್ಥಿತವಾಗಿರುವ ಸಾಧ್ಯತೆ ಅನೇಕ ಪಟ್ಟು ಹೆಚ್ಚಾಗುತ್ತದೆ. ಜಠರಾಗ್ನಿ ಹಾಳಾಗುವುದಕ್ಕೆ ಇನ್ನೂ ಅನೇಕ ಕಾರಣಗಳಿವೆ. ಆಯುರ್ವೇದದಲ್ಲಿ ‘ಅಗ್ನಿ ಸರಿಯಾಗಿದ್ದರೆ ಆರೋಗ್ಯಪೂರ್ಣ ಜೀವನ ನಡೆಸಬಹುದು ಮತ್ತು ಸರಿಯಾಗಿ ಇರದಿದ್ದರೆ ಎಲ್ಲ ರೋಗಗಳು ಬರುವ ಸಾಧ್ಯತೆ ಇರುತ್ತದೆ’, ಎಂದು ಹೇಳಲಾಗಿದೆ. ‘ಗಟ್ ಮೈಕ್ರೊಬಾಯೊಮ್’ ಅಥವಾ ‘ಕರುಳಿನಲ್ಲಿನ ಸೂಕ್ಷ್ಮ ಜೀವಾಣು’ಗಳಲ್ಲಿನ ಸಮತೋಲನದತ್ತ ಈಗ ಅನೇಕ ಸಂಶೋಧನೆಗಳ ಗಮನವಿದೆ. ‘ಪ್ರತಿಯೊಂದು ದೊಡ್ಡ ಅವಯವಗಳ ಆರೋಗ್ಯ ಹೊಟ್ಟೆಯ ಆರೋಗ್ಯವನ್ನು ಅವಲಂಬಿಸಿರುತ್ತದೆ’, ಇದು ಸಂಶೋಧನೆಯಿಂದ ಬೆಳಕಿಗೆ ಬರತೊಡಗಿದಂತೆ, ಆಯುರ್ವೇದ ದಲ್ಲಿ ಯಾವುದೇ ರೋಗಕ್ಕೆ ಕೇವಲ ಹೊಟ್ಟೆಯ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ನೀಡುತ್ತಾರೆ (ಇದು ಪೂರ್ಣ ಸತ್ಯವಲ್ಲ), ಉಳಿದ ವಾತ, ಪಿತ್ತ ಮತ್ತು ಕಫ ಇವುಗಳನ್ನು ಹೊರತುಪಡಿಸಿ ಬೇರೆ ಇನ್ನೇನಿದೆ ?’, ಈ ವಾಕ್ಯಗಳಲ್ಲಿ ಹೆಚ್ಚಿನವು ನಿರರ್ಥಕ ವಾಗತೊಡಗಿವೆ; ಏಕೆಂದರೆ ಆಯುರ್ವೇದವನ್ನು ಅಧ್ಯಯನ ಮಾಡದೇ ಎಷ್ಟೋ ಜನರೆದುರು ಅವರ ಭಾಷೆಯಲ್ಲಿ ಅದರ ಪ್ರಸ್ತುತಿ ವಿವಿಧ ಪದ್ಧತಿಯಲ್ಲಿ ಬೆಳಕಿಗೆ ಬರತೊಡಗಿದೆ.
ಪ್ರಸ್ತುತ ಕಾಲದಲ್ಲಿ ಶರೀರದಲ್ಲಿ ವಿಶೇಷವಾಗಿ ನಗರಗಳಲ್ಲಿ ಉಷ್ಣತೆಯ ಹೆಚ್ಚಳದಿಂದಾಗಿ ಆಗುವ ಬದಲಾವಣೆಯಲ್ಲಿ ವಿವಿಧ ಅರ್ಬುದ ರೋಗಗಳು, ‘ಇರಿಟೆಬಲ್ ಬಾವೆಲ್ ಸಿಂಡ್ರೋಮ್’ ನಂತಹ (ಐ.ಬಿ.ಎಸ್. – ಹೊಟ್ಟೆಯ ಒಂದು ಕಾಯಿಲೆ) ಕಾಯಿಲೆ, ಮೇಲಿಂದ ಮೇಲೆ ಬರುವ ಜ್ವರ, ಸಂಧಿವಾತ, ‘ಆಟೋ ಇಮ್ಯುನ್’ (ಸ್ವತಃದ ರೋಗನಿರೋಧಕ ಶಕ್ತಿ ಶರೀರದ ಮೇಲೆ ದಾಳಿ ಮಾಡಿ ಉದ್ಭವಿಸುವ ಕಾಯಿಲೆ) ಕಾಯಿಲೆಗಳ ಗಮನಾರ್ಹ ಹೆಚ್ಚಳವು ಖಂಡಿತವಾಗಿಯೂ ಚಿಂತಾಜನಕವಾಗಿದೆ. ಇದಕ್ಕೆ ಕಾಯಿಲೆಗನುಸಾರ ತಕ್ಷಣ ಪರಿಣಾಮ ಬೀರುವ ಔಷಧಿಗಳನ್ನು ನೀಡುವಾಗಲೂ ಯಾವ, ಎಷ್ಟು, ಯಾವಾಗ ಮತ್ತು ಎಷ್ಟು ಸಮಯ ? ಈ ಎಲ್ಲವುಗಳಲ್ಲಿಯೂ ಅಗ್ನಿಯ ವಿಚಾರ ಇದ್ದೇ ಇರುತ್ತದೆ. ಹೊಟ್ಟೆಯ ಸಮತೋಲನ ಕೆಟ್ಟರೆ, ಮುಂದಿನ ಎಲ್ಲ ಚಯಾಪಚಯದ ಮೇಲೆ ಪರಿಣಾಮವಾಗುತ್ತದೆ. ಇದೆಲ್ಲವನ್ನು ಕೇಳಲು ಬೇಸರ ಅನಿಸುತ್ತಿದ್ದರೂ ನಗರದಲ್ಲಿ ವಾಸಿಸುವ ಎಲ್ಲರೂ ಖಂಡಿತವಾಗಿಯೂ ಗಮನ ಹರಿಸಬೇಕಾದ ವಿಷಯವಾಗಿದೆ !
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.