ಪ್ರಯಾಗರಾಜ್ (ಉತ್ತರ ಪ್ರದೇಶ) – ಉದ್ಯೋಗ ಅಥವಾ ಇತರ ಆಸ್ತಿಗಳ ಮೂಲಕ ತನ್ನನ್ನು ಪೋಷಿಸಲು ಸಾಧ್ಯವಾಗದ ಅವಿವಾಹಿತ ಮಗಳನ್ನು ಪೋಷಿಸುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯ ಸೆಕ್ಷನ್ 20 ಇದನ್ನು ಒದಗಿಸುತ್ತದೆ. ಈ ಸೆಕ್ಷನ್ ಹಿಂದೂ ಸಿದ್ಧಾಂತದ ಸಂಕೇತವಾಗಿದೆ. ಅದರ ಅಡಿಯಲ್ಲಿ, ಅವಿವಾಹಿತ ಹುಡುಗಿಯ ಜವಾಬ್ದಾರಿಯನ್ನು ತಂದೆಗೆ ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರತಿತಿಂಗಳು ಪತ್ನಿಗೆ 25 ಸಾವಿರ ರೂಪಾಯಿ ಮತ್ತು ಮಗಳಿಗೆ 20 ಸಾವಿರ ರೂಪಾಯಿ ನೀಡುವಂತೆ ಹಾಥರಸ್ ಕುಟುಂಬ ನ್ಯಾಯಾಲಯವು ಓರ್ವ ತಂದೆಗೆ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ, ತಂದೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಬಾಲಕಿಗೆ ನಿರ್ವಹಣಾ ವೆಚ್ಚ ನೀಡುವಂತೆ ಹತ್ರಾಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ತಂದೆ ಒತ್ತಾಯಿಸಿದ್ದರು. ನಂತರ ಪತ್ನಿಯು ಜೀವನಾಂಶ ಮೊತ್ತ ಹೆಚ್ಚಿಸಬೇಕು ಎಂದು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿ ಮನೀಶ ಕುಮಾರ ನಿಗಮ್ ಅವರ ಏಕ ಪೀಠದ ಮುಂದೆ ಒಟ್ಟಿಗೆ ವಿಚಾರಣೆ ನಡೆಸಲಾಯಿತು.
ಏನಿದು ಪ್ರಕರಣ ?
ಈ ಜೋಡಿಯು 1992 ರಲ್ಲಿ ವಿವಾಹವಾಗಿದ್ದರು. ಪತಿ ಮತ್ತು ಅತ್ತೆಯಂದಿರು ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಅತ್ತೆಮನೆಯ ಕಿರುಕುಳದಿಂದ ಬೇಸತ್ತು 2009ರಲ್ಲಿ ತನ್ನ ಮಗಳೊಂದಿಗೆ ಮನೆ ತೊರೆದು ತಾಯಿ ಮನೆಗೆ ಹೋಗಿದ್ದಳು. ಯಾವುದೇ ಆದಾಯದ ಮೂಲವಿಲ್ಲದ ಕಾರಣ ಪತ್ನಿ ತನ್ನ ಸ್ವಂತ ಹಾಗೂ ಮಗಳ ನಿರ್ವಹಣೆ ವೆಚ್ಚಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಅರ್ಜಿಯನ್ನು ಅಂಗೀಕರಿಸಿದ ಕೌಟುಂಬಿಕ ನ್ಯಾಯಾಲಯವು ನಿರ್ವಹಣೆ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಅವಿವಾಹಿತ ಬಾಲಕಿಯ ನಿರ್ವಹಣಾ ವೆಚ್ಚದ ವಿಚಾರ ಪ್ರಸ್ತಾಪವಾಗಿತ್ತು. ಮಕ್ಕಳ ಪೋಷಣೆಯ ನೈತಿಕ ಹೊಣೆಗಾರಿಕೆಯು ಕುಟುಂಬದ ಮುಖ್ಯಸ್ಥನಾಗಿ ತಂದೆಯ ಮೇಲಿದೆ ಎಂದು ಹೈಕೋರ್ಟ್ ಎತ್ತಿಹಿಡಿದಿದೆ, ಆದರೆ ನಿರ್ವಹಣಾ ವೆಚ್ಚದ ಮೊತ್ತವನ್ನು ಹೆಚ್ಚಿಸುವಂತೆ ಪತ್ನಿಯ ಮನವಿಯನ್ನು ತಿರಸ್ಕರಿಸಿತು.