ಶ್ರೀನಗರ – ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಶ್ರೀನಗರದ ಬರ್ಜಲ್ಲಾದ ಶ್ರೀ ರಘುನಾಥ ದೇವಸ್ಥಾನಕ್ಕೆ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸುತ್ತಾ 160 ಕನಾಲ್ (20 ಎಕರೆ) (8 ಕನಾಲ್, ಅಂದರೆ 1 ಎಕರೆ) ಭೂಮಿಯ ಎಲ್ಲಾ ಸಂಶಯಾಸ್ಪದ ವರ್ಗಾವಣೆ ಒಪ್ಪಂದಗಳು ಮತ್ತು ಕಂದಾಯ ದಾಖಲೆಗಳನ್ನು ರದ್ದುಗೊಳಿಸಿತು. ಹೈಕೋರ್ಟ್ ತನ್ನ ಈ ಮಹತ್ವದ ತೀರ್ಪಿನಲ್ಲಿ, ಬಗತ್-ಎ-ಬರ್ಜುಲ್ಲಾ (ಬುಲ್ಬುಲ್ ಬಾಗ್) ನಲ್ಲಿ ದೇವಸ್ಥಾನದ ಅಂದಾಜು 140 ಕನಾಲ್ (17.5 ಎಕರೆ) ಭೂಮಿಯನ್ನು ತಕ್ಷಣವೇ ಸ್ವಾಧೀನಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿತು. ಈ ಭೂಮಿಯನ್ನು ಜಮ್ಮು-ಕಾಶ್ಮೀರ ಬಾರ್ ಅಸೋಸಿಯೇಷನ್‌ನ ಹಿರಿಯ ವಕೀಲ ಮತ್ತು ಅಧ್ಯಕ್ಷ ಮಿಯಾನ್ ಖಯೂಮ್ ಅವರು ಅಕ್ರಮವಾಗಿ ಕಬಳಿಸಿದ್ದರು. ನ್ಯಾಯಮೂರ್ತಿ ಸಂಜೀವ ಕುಮಾರ್ ಮತ್ತು ನ್ಯಾಯಮೂರ್ತಿ ಎಂ.ಎ. ಚೌಧರಿ ಅವರ ಪೀಠದ ಮುಂದೆ ಶ್ರೀ ರಘುನಾಥ ದೇವಸ್ಥಾನದ ಆಸ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯಿತು.
1. ಜಿಲ್ಲಾಡಳಿತದ ಅಧೀನದಲ್ಲಿರುವ ದೇವಸ್ಥಾನದ ಆಸ್ತಿ ದೇವಸ್ಥಾನದ ಹೆಸರಿನಲ್ಲಿ ಮಾತ್ರ ಉಳಿಯುವುದು ಮತ್ತು ಕಂದಾಯ ದಾಖಲೆಗಳಲ್ಲಿ ದಾಖಲಾಗುವುದು ಎಂದು ಹೈಕೋರ್ಟ್ ಹೇಳಿದೆ.
2. ಈ ಆಸ್ತಿಯಿಂದ ಬರುವ ಆರ್ಥಿಕ ಲಾಭವನ್ನು ದೇವಾಲಯದ ನಿರ್ವಹಣೆ ಮತ್ತು ಇತರ ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಲಾಗುವುದು.
3. ದೇವಸ್ಥಾನದ ಆಸ್ತಿಯಿಂದ ಬರುವ ಎಲ್ಲಾ ಹಣ ಮತ್ತು ಲಾಭವನ್ನು ಸರಿಯಾಗಿ ಲೆಕ್ಕ ಹಾಕಲು ದೇವಸ್ಥಾನದ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ ತೆರೆಯಲಾಗುವುದು. ಈ ಖಾತೆಯ ಜವಾಬ್ದಾರಿ ಜಿಲ್ಲಾಧಿಕಾರಿಯ ಕೈಯಲ್ಲಿರುವುದು.
4. ಶ್ರೀನಗರದ ಬಾರ್ಬರ್ ಷಾ ಪ್ರದೇಶದಲ್ಲಿರುವ ಬಾಬಾ ಧರಮ್ ದಾಸ್ ಅವರ ಮತ್ತೊಂದು ದೇವಸ್ಥಾನದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಜಿಲ್ಲಾಧಿಕಾರಿಗೆ ಸೂಚಿಸಿದೆ. ದೇವಾಲಯವು ಶ್ರೀನಗರ ಮತ್ತು ಬುದ್ಗಾಮ್‌ನಲ್ಲಿ 300 ಕನಾಲ್ (37.5 ಎಕರೆ) ಭೂಮಿಯನ್ನು ಹೊಂದಿದೆ. ಪ್ರಸ್ತುತ ಈ ಜಮೀನು ಜಹೂರ್ ವಟಾಲಿ ಅವರ ಅಧೀನದಲ್ಲಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ವಟಾಲಿ ಸದ್ಯ ಜೈಲಿನಲ್ಲಿದ್ದಾನೆ.