‘ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನಾ’ (ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ)
ಮುಂಬಯಿ – ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನೆಯು(ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ) ಸರಕಾರದ ಕಾರ್ಯತಂತ್ರದ ನಿರ್ಧಾರವಾಗಿದೆ. ಆದ್ದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿ ಮುಂಬಯಿ ಉಚ್ಚ ನ್ಯಾಯಾಲಯವು ಯೋಜನೆಯನ್ನು ಸ್ಥಗಿತಗೊಳಿಸುವ ಮನವಿಯನ್ನು ತಿರಸ್ಕರಿಸಿದೆ. ನವಿ ಮುಂಬಯಿ ಮೂಲದ ಅಕೌಂಟೆಂಟ್(ಲೆಕ್ಕ ಪರಿಶೋಧಕ) ನವೀದ್ ಅಬ್ದುಲ್ ಸಯೀದ್ ಮುಲ್ಲಾ ಅವರು ನ್ಯಾಯವಾದಿ ಓವೆಸ್ ಪೆಚ್ಕರ್ ಮೂಲಕ ಅರ್ಜಿಯನ್ನು ದಾಖಲಿಸಿದ್ದರು.
‘ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನೆ’ಗಾಗಿ (ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ) 24 ಸಾವಿರದ 600 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಈಗಾಗಲೇ 7.8 ಲಕ್ಷ ಕೋಟಿ ಸಾಲವಿದೆ. ಈ ಯೋಜನೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ. ರಾಜ್ಯದ ಹಣಕಾಸು ಇಲಾಖೆ ಕೂಡ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು; ಆದರೆ, ಸಚಿವ ಸಂಪುಟ ಸಭೆಯಲ್ಲಿ ರಾಜಕೀಯ ಉದ್ದೇಶದಿಂದ ರಾಜ್ಯ ಸರಕಾರವು ಈ ಯೋಜನೆಗೆ ಅನುಮೋದನೆ ನೀಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ವಿಭಾಗೀಯ ಪೀಠದ ಮುಂದೆ ಈ ವಿಚಾರಣೆ ನಡೆಯಿತು.