೨೦ ಕಿಂತಲೂ ಹೆಚ್ಚಿನ ಜನರಿಗೆ ಗಾಯ !
ಸಾಗರ (ಮಧ್ಯಪ್ರದೇಶ) – ಜಿಲ್ಲೆಯಲ್ಲಿನ ಶಾಹಪುರ್ ಗ್ರಾಮದಲ್ಲಿ ಆಗಸ್ಟ್ ೪ ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಒಂದು ದೊಡ್ಡ ಅವಘಡ ಸಂಭವಿಸಿದೆ. ಹಡೌಲ್ ಮಂದಿರದಲ್ಲಿ ಭಾಗವತ ಕಥೆ ಕಾರ್ಯಕ್ರಮದ ತಯಾರಿ ನಡೆಯುತ್ತಿತ್ತು ಹಾಗೂ ಅಲ್ಲಿ ಶಿವಲಿಂಗವನ್ನು ತಯಾರಿಸುತ್ತಿದ್ದರು. ಅನೇಕ ಯುವಕರು ಈ ಕಾರ್ಯಕ್ರಮಕ್ಕಾಗಿ ಉತ್ಸಾಹದಿಂದ ಅಲ್ಲಿ ಸೇರಿದ್ದರು. ಅದೇ ವೇಳೆ ದೇವಸ್ಥಾನದ ಹತ್ತಿರದ ಪುರಾತನ ಕಟ್ಟಡದ ಗೋಡೆಯೊಂದು ಕುಸಿದು ಬಿತ್ತು. ಮಕ್ಕಳ ಮೇಲೆ ಈ ಗೋಡೆ ಬಿದ್ದ ಪರಿಣಾಮ ಈ ದುರ್ಘಟನೆಯಲ್ಲಿ ೯ ಮಕ್ಕಳು ಸಾವನ್ನಪ್ಪಿದ್ದು, ೨೦ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಟ್ಟಡ ೨೫ ವರ್ಷ ಹಳೆಯದಾಗಿತ್ತು ಎಂದು ಹೇಳಲಾಗುತ್ತಿದೆ. ಈ ದುರ್ಘಟಯಿಂದ ಶಾಹಪುರ್ ದಲ್ಲಿ ಸದ್ಯ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮೃತ ಮಕ್ಕಳ ಕುಟುಂಬದವರಿಗೆ ತಲಾ ೪ ಲಕ್ಷ ರೂಪಾಯಿ ಪರಿಹಾರ
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ ಯಾದವ ಅವರು ಈ ಕುರಿತು ಮಾತನಾಡಿ, ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಮಕ್ಕಳ ಆರೋಗ್ಯ ಆದಷ್ಟು ಬೇಗನೆ ಸುಧಾರಿಸಲಿ ಎಂದು ನಾನು ಆಶಿಸುತ್ತೇನೆ. ಮೃತ ಮಕ್ಕಳ ಕುಟುಂಬದವರಿಗೆ ಸರಕಾರದಿಂದ ತಲಾ ೪ ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಘೋಷಿಸಿದರು.