ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೇಯಿ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ !

ಮಣಿಪುರದಲ್ಲಿ ಬಿಜೆಪಿ ಸರಕಾರದ ಪ್ರಯತ್ನಕ್ಕೆ ಯಶಸ್ಸು!

ನವದೆಹಲಿ – ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೆಯಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಸುಮಾರು ಒಂದು ವರ್ಷದ ಹಿಂಸಾಚಾರದ ನಂತರ ಮೊದಲ ಬಾರಿಗೆ ಜಿರಿಬಾಮ್ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಎರಡು ಸಮುದಾಯಗಳು ಒಪ್ಪಿಕೊಂಡಿವೆ. ಮಣಿಪುರದ ಬಿಜೆಪಿ ಸರಕಾರ ಪ್ರಕ್ಷುಬ್ಧ ರಾಜ್ಯದಲ್ಲಿ ಶಾಂತಿಯನ್ನು ತರಲು ವಿಫಲವಾಗಿದೆ ಎಂದು ಎಲ್ಲಾ ವಲಯಗಳಿಂದ ಟೀಕಿಸಲಾಗುತ್ತಿತ್ತು. ಹೀಗಿರುವಾಗ ಇದು ಸರಕಾರದ ಮೊದಲ ಯಶಸ್ಸು ಎಂದು ಹೇಳಲಾಗುತ್ತಿದೆ.

1. ಆಗಸ್ಟ್ 1 ರ ಬೆಳಿಗ್ಗೆ ನಡೆದ ಸಭೆಯಲ್ಲಿ ಮೈತೆಯಿ ಮತ್ತು ಕುಕಿ ಬಣಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದಕ್ಕೆ ಎರಡೂ ಕಡೆಯವರು ಸಹಿ ಹಾಕಿರುವುದು ಇಡೀ ರಾಜ್ಯಕ್ಕೆ ಶಾಂತಿಯ ಸಂದೇಶ ರವಾನಿಸಿದೆ.

2. ಈ ಒಪ್ಪಂದದ ಅಡಿಯಲ್ಲಿ, ಜಿರಿಬಾಮ್ ಜಿಲ್ಲೆಯಲ್ಲಿ ಬೆಂಕಿ ಮತ್ತು ಗುಂಡಿನ ದಾಳಿಗಳ ಘಟನೆಗಳನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ಮೊದಲಿನಂತೆಯೇ ಪುನರ್‍‌ಸ್ಥಾಪಿಸಲು ಎರಡೂ ಕಡೆಯವರು ಭದ್ರತಾ ಪಡೆಗಳೊಂದಿಗೆ ಸಹಕರಿಸುತ್ತಾರೆ.

3. ಈ ಸಭೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್ ಮತ್ತು ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

4. ರಾಜ್ಯ ಸರಕಾರದ ಮೂಲಗಳ ಪ್ರಕಾರ, ಸದ್ಯ ನಾವು ಒಂದು ಜಿಲ್ಲೆಗೆ ಸೀಮಿತವಾಗಿದ್ದೇವೆ. ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ಪುನರ್‍‌ಸ್ಥಾಪಿಸುವುದು ನಮ್ಮ ಅಂತಿಮ ಗುರಿಯಾಗಿದೆ ಎಂದು ಹೇಳಿದೆ.

5. ಈಗ ಉಭಯ ಪಕ್ಷಗಳ ನಡುವಿನ ಮುಂದಿನ ಸಭೆ ಆಗಸ್ಟ್ 15 ರ ನಂತರ ನಡೆಯಲಿದೆ.

6. ಇದಕ್ಕೂ ಮೊದಲು, ರಾಜ್ಯ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಶಾಂತಿ ಮಾತುಕತೆಗಾಗಿ ಸರಕಾರ ಶ್ರಮಿಸುತ್ತಿದೆ ಮತ್ತು ಅಸ್ಸಾಂನ ಜಿರಿಬಾಮ್ ಜಿಲ್ಲೆಯ ಗಡಿಯಲ್ಲಿರುವ ಸಿಲಚರ್‌ನಲ್ಲಿ ಹಲವಾರು ಚರ್ಚೆಗಳು ನಡೆದಿವೆ. ಈ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದ್ದರು.

ಹಿಂಸಾಚಾರದಿಂದ ಇದುವರೆಗೆ ಒಟ್ಟು 226 ಸಾವು !

ಮೇ 2023 ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಒಟ್ಟು 226 ಜನರು ಸಾವನ್ನಪ್ಪಿದ್ದಾರೆ ಮತ್ತು 39 ಮಂದಿ ಕಾಣೆಯಾಗಿದ್ದಾರೆ. 59 ಸಾವಿರದ 414 ಜನರು ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. 11 ಸಾವಿರದ 133 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 11 ಸಾವಿರದ 892 ದೂರುಗಳು ದಾಖಲಾಗಿವೆ.