Budget 2024 : ಕೇಂದ್ರದ ಬಜೆಟ್; ಮಧ್ಯಮ ವರ್ಗದ ನೌಕರ ವರ್ಗದವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ

  • ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಇದ್ದವರಿಗೆ ಯಾವುದೇ ತೆರಿಗೆ ಇಲ್ಲ!

  • ‘ಸ್ಟ್ಯಾಂಡರ್ಡ್ ಡಿಡಕ್ಷನ್’ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ

  • ಚಿನ್ನ, ಬೆಳ್ಳಿ, ಮೊಬೈಲ ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಅಗ್ಗ

ನವ ದೆಹಲಿ – ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ 2024-25 ನೇ ಸಾಲಿನ ಕೇಂದ್ರದ ಬಜೆಟ್(ಆಯ-ವ್ಯಯವನ್ನು) ಮಂಡಿಸಿದರು. ಎಂದಿನಂತೆ, ಈ ಬಾರಿಯ ಆಯ-ವ್ಯಯದಲ್ಲಿ ದೇಶವಾಸಿ ಆದಾಯ ತೆರಿಗೆದಾರರ ಗಮನ ಕೇಂದ್ರೀಕೃತವಾಗಿದ್ದ ಆದಾಯ ತೆರಿಗೆಯ ಮೇಲಿನ ರಿಯಾಯತಿಗಳು ಸ್ವಲ್ಪ ಸಮಾಧಾನ ನೀಡುವಂತಿದೆ. ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ‘ಸ್ಟ್ಯಾಂಡರ್ಡ್ ಡಿಡಕ್ಷನ್’ 50 ಸಾವಿರದಿಂದ 75 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ. ಅಲ್ಲದೆ, 3 ಲಕ್ಷದವರೆಗೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ. ಹಳೆಯ ಆದಾಯ ತೆರಿಗೆ ವ್ಯವಸ್ಥೆಯನುಸಾರ ತೆರಿಗೆ ಪಾವತಿಸುವ ನೌಕರವರ್ಗದವರಿಗೆ ಯಾವುದೇ ಬದಲಾವಣೆ ಮಾಡಿರುವುದಿಲ್ಲ; ಆದರೆ ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ಪಾವತಿಸುವ ನೌಕರರ 17 ಸಾವಿರ 500 ರೂಪಾಯಿ ಉಳಿತಾಯವಾಗಲಿದೆ.

ಸರಕಾರದ ಮುಂದೆ 9 ಆದ್ಯತೆ !

ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ ಅವರು ಬಜೆಟ್ ಮಂಡಿಸುವಾಗ, ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮೊದಲ ಆದ್ಯತೆ ಕೃಷಿ ಕ್ಷೇತ್ರದ ಉತ್ಪಾದನೆಯಾಗಿದೆ. ಎರಡನೇಯ ಆದ್ಯತೆ ಉದ್ಯೋಗ ಮತ್ತು ಕೌಶಲ್ಯಗಳು. ಮೂರನೇ ಆದ್ಯತೆ ಸಮಗ್ರ ಮಾನವಶಕ್ತಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ. ನಾಲ್ಕನೇ ಆದ್ಯತೆ ಉತ್ಪಾದನೆ ಮತ್ತು ಸೇವೆಯಾಗಿದೆ. ಐದನೇ ಆದ್ಯತೆ ನಗರಾಭಿವೃದ್ಧಿಗೆ ಚಾಲನೆ ನೀಡುವುದು. ಆರನೇ ಆದ್ಯತೆ ಶಕ್ತಿಯ ಭದ್ರತೆಯಾಗಿದೆ. ಏಳನೇ ಆದ್ಯತೆ ಮೂಲಭೂತ ಸೌಕರ್ಯವಾಗಿದೆ, ಎಂಟನೇ ಆದ್ಯತೆ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯಾಗಿದೆ. ಹಾಗೂ ಒಂಬತ್ತನೇ ಆದ್ಯತೆ ಮುಂದಿನ ಪೀಳಿಗೆಯ ಸುಧಾರಣೆಯಾಗಿದೆ. ಈ ಆದ್ಯತೆಯ ಆಧಾರದ ಮೇಲೆ ಮುಂಬರುವ ಆಯವ್ಯಯ ಸಿದ್ಧಪಡಿಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆ (ವಾರ್ಷಿಕ ಆದಾಯದನುಸಾರ)

0 ರಿಂದ 3 ಲಕ್ಷ ರೂಪಾಯಿ ಯಾವುದೇ ತೆರಿಗೆ ಇಲ್ಲ
3 ರಿಂದ 7 ಲಕ್ಷ ರೂಪಾಯಿ ಶೇ.5 ರಷ್ಟು
7 ರಿಂದ 10 ಲಕ್ಷ ರೂಪಾಯಿ ಶೇ. 10 ರಷ್ಟು
10 ರಿಂದ 12 ಲಕ್ಷ ರೂಪಾಯಿ ಶೇ. 15 ರಷ್ಟು
12 ರಿಂದ 15 ಲಕ್ಷ ರೂಪಾಯಿ ಶೇ. 20 ರಷ್ಟು
15 ಲಕ್ಷಕ್ಕಿಂತ ಅಧಿಕ ಶೇ. 30 ರಷ್ಟು

ಅಗ್ಗ ದುಬಾರಿ
ಚರ್ಮದ ವಸ್ತುಗಳು ಸಿಗರೇಟ
ಚಿನ್ನ ಮತ್ತು ಬೆಳ್ಳಿ , ಪ್ಲಾಟಿನಮ್ ಪ್ಲಾಸ್ಟಿಕ್ ವಸ್ತುಗಳು
ಮೊಬೈಲ್ ಪೆಟ್ರೊಕೆಮಿಕಲ್
ಮೊಬೈಲ್ ಚಾರ್ಜರ
ಇಲೆಕ್ಟ್ರಿಕ್ ವಾಹನ
ಕ್ಯಾನ್ಸರ ಔಷಧಿಗಳು
ವಿದ್ಯುತ್ ತಂತಿ
ಎಕ್ಸರೆ ಮಶೀನ
ಸೌರ

ಬಿಹಾರದ ಗಯಾದಲ್ಲಿನ ಮಹಾಬೋಧಿ ಮತ್ತು ವಿಷ್ಣುಪದ ದೇವಸ್ಥಾನಗಳಿಗೆ ಸುಸಜ್ಜಿತ ಕಾರಿಡಾರ ನಿರ್ಮಿಸುವ ಘೋಷಣೆ. ಈ ಕಾರಿಡಾರ ಕಾಶಿ ವಿಶ್ವನಾಥ ಧಾಮದಲ್ಲಿ ನಿರ್ಮಿಸಿರುವಂತೆ ಸುಸಜ್ಜಿತ ಮಾರ್ಗ ನಿರ್ಮಿಸಲಾಗುವುದು. ಇದರೊಂದಿಗೆ ರಾಜಗೀರ್‌ನಲ್ಲಿರುವ ಬೌದ್ಧ ಮತ್ತು ಜೈನ ಧಾರ್ಮಿಕ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ನಾಲಂದವನ್ನು ‘ಪ್ರವಾಸೋದ್ಯಮ ಕೇಂದ್ರ’ವೆಂದು ಪ್ರಸಿದ್ಧಿಯನ್ನು ಪಡೆಯಲು ಅದನ್ನು ಕೂಡ ಅಭಿವೃದ್ಧಿಪಡಿಸಲಾಗುವುದು.

4 ಕೋಟಿ ಉದ್ಯೋಗ ಒದಗಿಸಲಿದೆ

ಆಯ-ವ್ಯಯದಲ್ಲಿ ಮುಂದಿನ 5 ವರ್ಷಗಳಲ್ಲಿ 4 ಕೋಟಿ 10 ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದೆ. ಇದಕ್ಕಾಗಿ ಹಣಕಾಸು ಸಚಿವರು 2 ಲಕ್ಷ ಕೋಟಿ ರೂಪಾಯಿ ಅನುದಾನದ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಇದಕ್ಕಾಗಿ ನಾಗರಿಕರ ಕೌಶಲ್ಯ ಅಭಿವೃದ್ಧಿಗೆ 1 ಲಕ್ಷ 48 ಸಾವಿರ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದ್ದಾರೆ. 5 ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರ ಕೌಶಲ್ಯವನ್ನು ಅಭಿವೃದ್ಧಿ ಮಾಡಲಾಗುವುದು. ಒಟ್ಟು 1 ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳು ನವೀಕರಣಗೊಳಿಸಲಾಗುವುದು.

ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್

ದೇಶದ ಪ್ರಮುಖ 500 ಸಂಸ್ಥೆಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ಇಂಟರ್ನ್‌ಶಿಪ್ ಭತ್ಯೆ ಮತ್ತು 6 ಸಾವಿರ ರೂಪಾಯಿಗಳ ಏಕರೂಪದ ಭತ್ಯೆ ಇರುತ್ತದೆ.

ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಅಗ್ಗವಾಗಲಿದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಆಯ-ವ್ಯಯದಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 6 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಹಾಗೆಯೇ ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 6.4 ರಷ್ಟು ಕಡಿಮೆ ಮಾಡಲಾಗುವುದು. ಇದರಿಂದಾಗಿ ಅವುಗಳ ದರಗಳು ಕಡಿಮೆಯಾಗುತ್ತವೆ. ಸೀತಾರಾಮನ್ ಅವರು ಉಕ್ಕು ಮತ್ತು ತಾಮ್ರದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಘೋಷಿಸಿದ್ದಾರೆ.

ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ವಿಶೇಷ ಯೋಜನೆ

ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ರೂಪಾಯಿ ಮತ್ತು ಬಿಹಾರಕ್ಕೆ 41 ಸಾವಿರ ಕೋಟಿ ರೂಪಾಯಿಗಳ ವ್ಯವಸ್ಥೆಯನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ. ಹಾಗೆಯೇ ಬಿಹಾರ, ಝಾರಖಂಡ, ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಬಿಹಾರದಲ್ಲಿ ರಸ್ತೆ ಸಂಪರ್ಕ ಯೋಜನೆಗಳಿಗೆ 26 ಸಾವಿರ ಕೋಟಿ ರೂಪಾಯಿ ನೀಡಲಾಗುವುದು. ‘ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ’, ‘ಬಕ್ಸರ್-ಭಾಗಲ್ಪುರ ಎಕ್ಸ್‌ಪ್ರೆಸ್‌ವೇ’ ನಿರ್ಮಿಸಲಾಗುವುದು. ಬಿಹಾರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುವುದು. ಅದರೊಂದಿಗೆ ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ನಗರದ ಅಭಿವೃದ್ಧಿಗೆ 15 ಸಾವಿರ ಕೋಟಿ ರೂಪಾಯಿ ನೀಡಲಾಗುವುದು. ಬೋಧಗಯಾ, ರಾಜಗೀರ, ವೈಶಾಲಿ ಮತ್ತು ದರ್ಭಾಂಗವನ್ನು ಸಂಪರ್ಕಿಸುವ ಯೋಜನೆಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು. ಬಕ್ಸರ್‌ನಲ್ಲಿನ ಗಂಗಾ ನದಿಗೆ ಹೆಚ್ಚುವರಿ ದ್ವಿಪದಿ ಸೇತುವೆಯನ್ನು ನಿರ್ಮಿಸಲಾಗುವುದು. ಬಿಹಾರದಲ್ಲಿ 21 ಸಾವಿರದ 400 ಕೋಟಿ ರೂಪಾಯಿ ವೆಚ್ಚದಲ್ಲಿ ಶಕ್ತಿ ಯೋಜನೆಗಳು ಕಾರ್ಯಾರಂಭ ಮಾಡಲಿವೆ. ಬಿಹಾರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣದೊಂದಿಗೆ ಕ್ರೀಡೆಗಾಗಿ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಲಾಗುವುದು.

ಆಯ-ವ್ಯಯದ ಪ್ರಮುಖ ಅಂಶಗಳು

  • ಮೊದಲ ಬಾರಿಗೆ ನೌಕರಿ ಮಾಡುವವರ ವೇತನ 1 ಲಕ್ಷಕ್ಕಿಂತ ಕಡಿಮೆಯಿದ್ದರೆ, ಹಾಗೆಯೇ ಮೊದಲ ಬಾರಿಗೆ `ಇಪಿಎಫ್.ಓ’ ನಲ್ಲಿ ನೊಂದಣಿ ಮಾಡುವ ಜನರಿಗೆ 3 ವಾರಗಳಲ್ಲಿ 15 ಸಾವಿರ ರೂಪಾಯಿಗಳ ಸಹಾಯವನ್ನು ಒದಗಿಸಲಾಗುವುದು.
  • ಯಾರಿಗೆ ಸರಕಾರದ ಯೋಜನೆಯಡಿಯಲ್ಲಿ ಯಾವುದೇ ಲಾಭ ಸಿಗುತ್ತಿಲ್ಲ, ಅಂತಹ ವಿದ್ಯಾರ್ಥಿಗಳಿಗೆ ದೇಶಾದ್ಯಂತದ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಸಾಲ ಸಿಗಲಿದೆ. ಸರಕಾರ ಸಾಲದ ಶೇ. 3 ರಷ್ಟು ಮೊತ್ತವನ್ನು ನೀಡುತ್ತದೆ. ಇದಕ್ಕಾಗಿ ಇ-ವೋಚರ್ ಆರಂಭಿಸಲಾಗುವುದು, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗುವುದು.
  • 6 ಕೋಟಿ ರೈತರ ಮಾಹಿತಿಯನ್ನು ಭೂಮಿ ನೋಂದಣಿಯ ಮೇಲೆ ತರಲಾಗುವುದು. 5 ರಾಜ್ಯಗಳಲ್ಲಿ ಹೊಸ ‘ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ನೀಡಲಾಗುವುದು.
  • ಯುವಕರಿಗಾಗಿ ಮುದ್ರಾ ಸಾಲದ ಮೊತ್ತ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
  • ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆ
  • ‘ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ ಇದರಲ್ಲಿ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುತ್ತದೆ.
  • ಈಶಾನ್ಯ ಪ್ರದೇಶದಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್’ ನ 100 ಕ್ಕೂ ಹೆಚ್ಚು ಶಾಖೆಗಳು ಪ್ರಾರಂಭಿಸಲಾಗುವುದು.