ಕಠ್ಮಂಡು – ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಕೆ.ಪಿ. ಶರ್ಮ ಓಲಿ ಇವರು ನೇಪಾಳದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ನಂತರ ಓಲಿ ತಮ್ಮ ಸಚಿವ ಸಂಪುಟದಲ್ಲಿ 22 ಸಚಿವರನ್ನು ನೇಮಿಸುವುದಾಗಿ ಘೋಷಿಸಿದರು. ಇದರಲ್ಲಿ ಓಲಿಯನ್ನು ಬೆಂಬಲಿಸುವ 4 ಪಕ್ಷಗಳ ನಾಯಕರಿಗೆ ಸ್ಥಾನ ನೀಡಲಾಗಿದೆ.
1. ನೇಪಾಳದಲ್ಲಿ ರಾಜಪ್ರಭುತ್ವ ಕೊನೆಗೊಂಡು 16 ವರ್ಷಗಳಾಗಿವೆ. ಈ 16 ವರ್ಷಗಳಲ್ಲಿ ದೇಶದಲ್ಲಿ 14 ಸರಕಾರಗಳು ರಚನೆಯಾಗಿವೆ. ದೇಶದಲ್ಲಿ ರಾಜಕೀಯ ಸ್ಥಿರತೆ ತರಲು ಓಲಿ ಅವರಿಗೆ ದೊಡ್ಡ ಸವಾಲು ಎದುರಾಗಲಿದೆ.
2. ಸಂಸತ್ತಿನಲ್ಲಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ಸರಕಾರ ಪತನಗೊಂಡಿತು. ಆನಂತರ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರು ನೇಪಾಳದ ಸಂವಿಧಾನದ 76-2 ನೇ ವಿಧಿಯ ಅಡಿಯಲ್ಲಿ ‘ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸ್‌ವಾದಿ ಲೆನಿನಿಸ್ಟ್‌ನ’ನ ಅಧ್ಯಕ್ಷ ಓಲಿ ಅವರನ್ನು ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು.
3. ಓಲಿ ಅವರು ಪ್ರಧಾನಿಯಾಗಿ ನೇಮಕಗೊಂಡ 30 ದಿನಗಳ ಒಳಗೆ ಸಂಸತ್ತಿನಲ್ಲಿ ವಿಶ್ವಾಸ ಮತವನ್ನು ಗೆಲ್ಲಬೇಕಾಗುತ್ತದೆ. 275 ಸ್ಥಾನಗಳ ಸಂಸತ್ತಿನಲ್ಲಿ ಓಲಿ ಅವರಿಗೆ ಕನಿಷ್ಠ 138 ಮತಗಳ ಅಗತ್ಯವಿದೆ.
4. ನೇಪಾಳದ ಪ್ರಧಾನಿಯಾಗಿ ನೇಮಕಗೊಂಡ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಓಲಿ ಅವರನ್ನು ಅಭಿನಂದಿಸಿದ್ದಾರೆ. ‘ಉಭಯ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಉತ್ಸುಕರಾಗಿರುವೆವು ಎಂದು ಮೋದಿ ಹೇಳಿದ್ದಾರೆ.