ಖಾಸಗಿ ವೈದ್ಯರ ಕುರಿತು ನ್ಯಾಯಾಲಯ ತೆಗೆದುಕೊಂಡ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕರಣ
ನವದೆಹಲಿ – ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಆರೋಪ ಹೊತ್ತಿರುವ ‘ಪತಂಜಲಿ ಆಯುರ್ವೇದ ಲಿಮಿಟೆಡ್’ ವಿರುದ್ಧದ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆಯಿತು. ಈ ವಿಚಾರಣೆಯ ವೇಳೆ ಐಎಂಎ ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಅವರು ಸರ್ವೋಚ್ಚ ನ್ಯಾಯಾಲಯದ ವಿರುದ್ಧ ನೀಡಿರುವ ಹೇಳಿಕೆಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಅದನ್ನು ಎಲ್ಲೆಡೆ ಪ್ರಸಾರ ಮಾಡಲಾಗಿದೆಯೆಂದು ಐಎಂಎ ಪರ ನ್ಯಾಯವಾದಿ ಪಿ.ಎಸ್. ಪಟವಾಲಿಯಾ ಅವರು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಸಂದೀಪ ಮೆಹತಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಈ ಪ್ರಕರಣದಲ್ಲಿ ಐಎಂಎ ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಅವರು ಹೆಚ್ಚುವರಿ ಪ್ರತಿಜ್ಞಾ ಪತ್ರವನ್ನು ಜುಲೈ 6 ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ಪ್ರತಿವಾದಿಗಳಿಗೆ ಪ್ರತಿಜ್ಞಾ ಪತ್ರ ಅಭ್ಯಾಸ ಮಾಡಲು ಸಮಯ ಸಿಗಬೇಕೆಂದು ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 6ರ ವರೆಗೆ ಮುಂದೂಡಿದೆ.
1. ‘ಪತಂಜಲಿ ಆಯುರ್ವೇದ ಲಿಮಿಟೆಡ್’ ತನ್ನ ಉತ್ಪಾದನೆಗಳ ಬಗ್ಗೆ ತಥಾಕಥಿತ ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಐಎಂಎ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿತ್ತು.
2. ಈ ವಿಚಾರಣೆ ವೇಳೆ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕೆ ಬಾಬಾ ರಾಮದೇವ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ಕ್ಷಮಾಯಾಚನೆ ಮಾಡಿದ್ದರು. ತದನಂತರ ಸರ್ವೋಚ್ಚ ನ್ಯಾಯಾಲಯವು ಐಎಂಎ ಕೂಡ ಸ್ವಂತ ಮನೆಯನ್ನು `ಸರಿಪಡಿಸುವ’ ಆವಶ್ಯಕವಿದೆ’, ಎಂದು ಟಿಪ್ಪಣೆ ಮಾಡಿತ್ತು. ಅಲ್ಲದೇ ಖಾಸಗಿ ಡಾಕ್ಟರರು ಮಾಡುತ್ತಿರುವ ಅನೈತಿಕ ಕೃತ್ಯಗಳ ಬಗ್ಗೆಯೂ ಹೇಳಿಕೆ ನೀಡಿತ್ತು.
3. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಡಾ. ಅಶೋಕನ್‌ಗೆ ಸರ್ವೋಚ್ಚ ನ್ಯಾಯಾಲಯವು ಖಾಸಗಿ ವೈದ್ಯರ ವಿಷಯದಲ್ಲಿ ತೆಗೆದುಕೊಂಡ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, `ನ್ಯಾಯಾಲಯವು ತೆಗೆದುಕೊಂಡ ನಿಲುವು ಅದರ ಗೌರವಕ್ಕೆ ಸರಿಹೊಂದುವುದಿಲ್ಲ’,ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಛೀಮಾರಿ ಹಾಕಿದ ನ್ಯಾಯಾಲಯ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆದೇಶಿಸಿತ್ತು.