ಪ್ರಧಾನಿ ಮೋದಿಯವರು ತಮ್ಮ ಸಂಪೂರ್ಣ ಆಯುಷ್ಯವನ್ನು ಭಾರತದ ಜನತೆಗಾಗಿ ಸಮರ್ಪಿಸಿದ್ದಾರೆ ! – ರಷ್ಯಾ ಅಧ್ಯಕ್ಷ ಪುತಿನ್

ಮಾಸ್ಕೋ – ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ರಷ್ಯಾ ಮತ್ತು ಆಸ್ಟ್ರಿಯಾ ದೇಶಗಳ ಪ್ರವಾಸದಲ್ಲಿದ್ದಾರೆ. ಜುಲೈ 8 ರಂದು ಮಾಸ್ಕೋ ತಲುಪಿದ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ರಷ್ಯಾ ಉಪಪ್ರಧಾನಿ ಡೆನಿಸ್ ಮಾಂತುರೊವ್ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಜುಲೈ 8ರ ರಾತ್ರಿ ಪ್ರಧಾನಿ ಮೋದಿ ಅವರು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಭೇಟಿಯಾದರು. ಭಾರತದ ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿಯವರ ಕೊಡುಗೆಯನ್ನು ಪುತಿನ್ ಶ್ಲಾಘಿಸಿದರು.ಪುತಿನ್ ಮಾತನಾಡಿ,”ನೀವು ನಿಮ್ಮ ಸಂಪೂರ್ಣ ಜೀವನವನ್ನು ಭಾರತದ ಜನರಿಗಾಗಿ ಅರ್ಪಿಸಿದ್ದೀರಿ. ನಿಮ್ಮಲ್ಲಿ ನಿಮ್ಮದೇ ಆದ ವಿಚಾರಗಳಿವೆ. ನೀವು ಉತ್ಸಾಹಿ ವ್ಯಕ್ತಿ ಆಗಿದ್ದೀರಿ. ನೀವು ಯಾವಾಗಲೂ ಭಾರತ ಮತ್ತು ಭಾರತೀಯರ ಹಿತಾಸಕ್ತಿಯಲ್ಲಿ ಕಾರ್ಯ ಸಾಧಿಸಿದ್ದೀರಿ. ಅದರ ಫಲಿತಾಂಶಗಳು ಕಂಡುಬರುತ್ತಿವೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ.” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಭಾರತದ ಜನರು ನನಗೆ ತಾಯ್ನಾಡಿನ ಸೇವೆ ಮಾಡಲು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ಈ ಜನರಿಗೆ ಮತ್ತು ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಏಕೈಕ ಗುರಿಯಾಗಿದೆ”, ಎಂದರು.

ರಷ್ಯಾ ಅಧ್ಯಕ್ಷರ ನಿವಾಸದಲ್ಲಿ ಚಹಾ ಸೇವಿಸುವ ಮೂಲಕ ಇಬ್ಬರು ವಿಶ್ವ ನಾಯಕರು ಅನೌಪಚಾರಿಕ ಮಾತುಕತೆ ನಡೆಸಿದರು. ಇದರಿಂದ ಉಭಯ ದೇಶಗಳ ಮಧ್ಯೆ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಾಗ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ.