ಹಾಥರಸ (ಉತ್ತರಪ್ರದೇಶ) ಕಾಲ್ತುಳಿತದ ಬಳಿಕ ಬಾಬಾ ಹೇಳಿಕೆ
ಹಾಥರಸ (ಉತ್ತರಪ್ರದೇಶ) – ರತಿಭಾನಪುರದಲ್ಲಿರುವ ಫುಲರಾಯಿ ಗ್ರಾಮದಲ್ಲಿ ಭೋಲೇ ಬಾಬಾ ಅವರ ಸತ್ಸಂಗದ ನಂತರ ನಡೆದಿರುವ ಕಾಲ್ತುಳಿತದಲ್ಲಿ ೧೨೧ ಜನರು ಸಾವನ್ನಪ್ಪಿದ್ದರು. ಜುಲೈ ೨ ರಂದು ಈ ಘಟನೆ ನಡೆದ ಬಳಿಕ ಕಾರ್ಯಕ್ರಮದ ಆಯೋಜಕರಾದ ದೇವಪ್ರಕಾಶ ಮಧುಕರ್ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿತ್ತು. ಮಧುಕರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಘಟನೆಯ ಬಗ್ಗೆ ಭೋಲೆ ಬಾಬಾ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಈ ಘಟನೆಯಿಂದ ನಾನು ಬಹಳ ನೊಂದಿದ್ದೇನೆ. ದೇವರು ನಮಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ’ ಎಂದು ಅವರು ಹೇಳಿದ್ದಾರೆ. ‘ನಮಗೆ ಸರಕಾರ ಮತ್ತು ಆಡಳಿತದ ಮೇಲೆ ವಿಶ್ವಾಸವಿದೆ. ಯಾರು ಸಮಾಜಘಾತಕರಿದ್ದಾರೆ, ಅವರಿಗೆ ಶಿಕ್ಷೆ ಆಗುವುದು. ನಾವು ಸಾವನ್ನಪ್ಪಿರುವ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದೇವೆ. ಸಾವನ್ನಪ್ಪಿರುವ ಕುಟುಂಬದವರ ಜೊತೆಗೆ ನಮ್ಮ ಸಹನಭೂತಿ ಶಾಶ್ವತವಾಗಿರುವುದು’ ಎಂದಿದ್ದಾರೆ.
ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಹಿಂದಿನ ಕಾರಣದ ಪ್ರಾರ್ಥಮಿಕ ಅಧ್ಯಯನ ನಡೆಸಿ ವಿಶೇಷ ತನಿಖಾದಳದಿಂದ ೧೫ ಪುಟದ ಪ್ರಾರ್ಥಮಿಕ ವರದಿ ತಯಾರಿಸಲಾಗಿದೆ. ಇದರಲ್ಲಿ ಸಂಪೂರ್ಣ ಆರೋಪ ಸರಕಾರ ಮತ್ತು ಆಯೋಜಕರ ಮೇಲೆ ಹೊರಿಸಲಾಗಿದೆ. ಅವಶ್ಯಕತೆ ಅನಿಸಿದರೆ ಭೋಲೆ ಬಾಬಾ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು.
ಕಾಲ್ತುಳಿತ ನಡೆದದ್ದು ಹೇಗೆ?
ಕಾರ್ಯಕ್ರಮಕ್ಕೆ ಅಪೇಕ್ಷೆಗಿಂತಲೂ ಸಾವಿರಾರು ಜನರು ಹೆಚ್ಚು ಆಗಮಿಸಿದ್ದರು. ಭೋಲೆ ಬಾಬಾ ಅವರು ಸತ್ಸಂಗದ ಸ್ಥಳದಿಂದ ನಿರ್ಗಮಿಸಿದ ನಂತರ ಅವರು ಸ್ಪರ್ಶಿಸಿರುವ ಮಣ್ಣು ತೆಗೆದುಕೊಳ್ಳುವುದಕ್ಕಾಗಿ ಜನ ಜಂಗುಳಿ ಸೇರಿತು. ಈ ಘಟನೆಯಲ್ಲಿ ಅನೇಕ ಭಕ್ತರು ಹತ್ತಿರದ ಕಾಲುವೆಗೆ ಬಿದ್ದರು.