ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ವೇಳೆ ವಿಪಕ್ಷ ನಾಯಕರ ಸಭಾತ್ಯಾಗ

ವಿಪಕ್ಷ ನಾಯಕರು ಭಾರತೀಯ ಸಂವಿಧಾನಕ್ಕೆ ಬೆನ್ನು ತೋರಿಸಿದರು ! – ಸಭಾಧ್ಯಕ್ಷರು, ಜಗದೀಪ ಧನಕಡ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ಅಂಶಗಳಿಗೆ ಲೋಕಸಭೆಯಲ್ಲಿ ಉತ್ತರಿಸಿದ ನಂತರ ಜುಲೈ 3 ರಂದು ಪ್ರಧಾನಿ ರಾಜ್ಯಸಭೆಯಲ್ಲಿಯೂ ಉತ್ತರಿಸಿದರು. ಆಗ ವಿರೋಧ ಪಕ್ಷದ ನಾಯಕರು ಪ್ರಧಾನಿಯನ್ನು ತಡೆಯಲು ಯತ್ನಿಸಿದರು; ಆದರೆ ಅವರು ಯಶಸ್ವಿಯಾಗದೇ ಇದ್ದಾಗ ವಿಪಕ್ಷ ನಾಯಕರು ಸಭಾತ್ಯಾಗ ಮಾಡಿದರು. ಇದಕ್ಕೆ ಸಭಾಧ್ಯಕ್ಷ ಜಗದೀಪ ಧನಕರ್ ವಿಷಾದ ವ್ಯಕ್ತಪಡಿಸಿದರು. ಇದು ಅತ್ಯಂತ ದುಃಖಕರ ಮತ್ತು ಅಸಭ್ಯ ವರ್ತನೆಯಾಗಿದೆ. ನಾನು ಅವರೊಂದಿಗೆ ಚರ್ಚಿಸಿದ್ದೆ, ಅವರಿಗೆ ವಿನಂತಿ ಮಾಡಿದ್ದೆ, ವಿರೋಧ ಪಕ್ಷದ ಮುಖಂಡರಿಗೆ ಯಾವುದೇ ಅಡೆತಡೆಯಿಲ್ಲದೇ ಮಾತನಾಡುವ ಅವಕಾಶವನ್ನು ಕೂಡ ನೀಡಿದ್ದೆ. ಇಂದು ಅವರು ಕೇವಲ ಸದನವನ್ನು ಬಿಟ್ಟು ಹೋಗಿಲ್ಲ. ಅವರು ನಾಚಿಕೆ ಬಿಟ್ಟು ಹೋಗಿದ್ದಾರೆ. ಇಂದು ಅವರು ನನಗೆ ಬೆನ್ನು ತೋರಿಸಿಲ್ಲ. ಬದಲಾಗಿ ಭಾರತೀಯ ಸಂವಿಧಾನಕ್ಕೆ ಬೆನ್ನು ತೋರಿಸಿದ್ದಾರೆ. ಇಂದು ಅವರು ನನಗೆ ಮತ್ತು ನಿಮಗೆ ಅಗೌರವ ತೋರಿಸಿಲ್ಲ. ಬದಲಾಗಿ ಯಾವ ಸಂವಿಧಾನದ ಸಾಕ್ಷಿಯಿಂದ ಪ್ರತಿಜ್ಞೆ ತೆಗೆದುಕೊಂಡರೋ, ಆ ಪ್ರತಿಜ್ಞೆಯನ್ನು ಅಗೌರವಿಸಿದ್ದಾರೆ. ಭಾರತದ ಸಂವಿಧಾನಕ್ಕೆ ಇದಕ್ಕಿಂತ ದೊಡ್ಡ ಅಪಮಾನ ಬೇರೆ ಯಾವುದೂ ಇರಲಾರದು ಎಂದು ಧನಕರ್ ಖೇದ ವಕ್ತಪಡಿಸಿದರು.

ವಿಪಕ್ಷ ನಾಯಕರು ಪಧಾನಿ ಮೋದಿಯವರ ಭಾಷಣವನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದರು; ಆದರೆ ಅವರು ಯಶಸ್ವಿಯಾಗಲಿಲ್ಲ. ಆಗ ರಾಜ್ಯಸಭೆಯ ವಿರೋಧಿ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮುಂದಾಳತ್ವ ವಹಿಸಿ ಸಭಾಧ್ಯಕ್ಷರ ಎದುರಿಗೆ ಬಂದು ಪ್ರಧಾನಮಂತ್ರಿಯವರಿಗೆ ಭಾಷಣವನ್ನು ನಿಲ್ಲಿಸುವಂತೆ ವಿನಂತಿಸಿದರು. ಈ ಎಲ್ಲ ವರ್ತನೆಗಳಿಂದ ಬೇಸರಗೊಂಡ ಸಭಾಧ್ಯಕ್ಷ ಜಗದೀಪ ಧನಕಡ್ ಅವರು ವಿಪಕ್ಷ ನಾಯಕರಿಗೆ ಸಮಜಾಯಿಷಿ ನೀಡಿದರು. ಆದರೂ ಬಗ್ಗದ ಸಂಸದರು ಪ್ರಧಾನಿಯವರ ಭಾಷಣದ ನಡುವೆಯೇ ಸಭಾತ್ಯಾಗ ಮಾಡಿದರು.

ಸಭಾಧ್ಯಕ್ಷ ಧನಕಡ್ ಈ ಬಗ್ಗೆ ಮಾತನಾಡಿ, ನಾವು ದೇಶವನ್ನು ಮಾರ್ಗದರ್ಶನ ಮಾಡಬೇಕಾಗಿದೆ. ದೇಶದ 140 ಕೋಟಿ ಜನರು ಇದರಿಂದ ದುಃಖಿತರಾಗಿದ್ದಾರೆ. ವಿರೋಧ ಪಕ್ಷದವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ, ಅವರೂ ಕೂಡ ಆಡಳಿತ ಪಕ್ಷದವರ ಹೇಳಿಕೆಯನ್ನು ಕೇಳಲೇಬೇಕು. ಇದನ್ನೇ ಸಭಾಗೃಹವೆನ್ನುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಂಸತ್ತು ಮತ್ತು ಸಂವಿಧಾನವನ್ನು ಅಗೌರವಿಸುವ ವಿರೋಧ ಪಕ್ಷವು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ! ಇಂತಹವರಿಗೆ ಇತರರನ್ನು ಟೀಕಿಸುವ ಯಾವ ಅಧಿಕಾರವಿದೆ?