Governor Files Case Against Bengal CM: ಬಂಗಾಳದ ರಾಜ್ಯಪಾಲರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ!

  • ದೇಶದ ಇತಿಹಾಸದಲ್ಲಿ ಇದು ಮೊದಲನೇ ಘಟನೆ !

  • ‘ಮಹಿಳೆಯರು ರಾಜಭವನಕ್ಕೆ ಹೋಗಲು ಹೆದರುತ್ತಾರೆ’ ಎಂದು ಮಮತಾ ಬ್ಯಾನರ್ಜಿಯವರು ಹೇಳಿದ್ದರು.

ಕೋಲಕಾತಾ (ಬಂಗಾಳ) – ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸರವರು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಈ ರೀತಿ ಓರ್ವ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಹಲವು ದಿನಗಳಿಂದ ವಾಗ್ವಾದ ನಡೆಯುತ್ತಿದೆ. ಕೆಲವು ಮಹಿಳೆಯರು ಆನಂದ ಬೋಸರವರ ವಿರುದ್ಧ ವಿನಯಭಯಂಗದ ದೂರು ದಾಖಲಿಸಿದ್ದಾರೆ. ಈ ಕುರಿತು ಮಮತಾರವರು ಮಾತನಾಡುತ್ತ, ರಾಜಭವನದಲ್ಲಿನ ಕೆಲಸಕಾರ್ಯಗಳಿಗಾಗಿ ಅಲ್ಲಿಗೆ ಹೋಗಲು ಭಯವಾಗುತ್ತಿದೆ ಎಂದು ಮಹಿಳೆಯರು ನನ್ನ ಬಳಿ ದೂರು ನೀಡಿದ್ದರು, ಎಂದು ಹೇಳಿದ್ದರು.

ಮೇ 2 ರಂದು ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜಭವನದ ಆಗಿನ ಮಹಿಳಾ ಉದ್ಯೋಗಿಯೊಬ್ಬರು ರಾಜ್ಯಪಾಲರ ವಿರುದ್ಧ ವಿನಯಭಯಂಗದ ಆರೋಪ ಮಾಡಿದ್ದರು. ಮಮತಾ ಸರಕಾರವು ಈ ಪ್ರಕರಣದ ತನಿಖೆಯನ್ನು ಪೊಲೀಸರಿಗೆ ಒಪ್ಪಿಸಿತ್ತು. ಅದೇ ಸಮಯದಲ್ಲಿ, ರಾಜ್ಯಪಾಲರು ರಾಜಭವನದಲ್ಲಿ ಪೊಲೀಸರ ಪ್ರವೇಶವನ್ನು ನಿಷೇಧಿಸಿದರು.

ಮತ್ತೊಂದು ಪ್ರಕರಣದಲ್ಲಿ, ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಒಡಿಸ್ಸಿ ಸಾಂಪ್ರದಾಯಿಕ ನರ್ತಕಿಯೊಬ್ಬರು ಗವರ್ನರ ಬೋಸರವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.

ಇದು ನನ್ನ ಮಾನಹಾನಿ ಮಾಡುವ ಸಂಚು ! – ಗವರ್ನರ್ ಬೋಸ್

ರಾಜ್ಯಪಾಲರು `ಎಕ್ಸ’ನಲ್ಲಿ ಹಾಕಿರುವ ಪೋಸ್ಟನಲ್ಲಿ ತಮ್ಮ ಮೇಲಿನ ಆರೋಪವನ್ನು ತಿರಸ್ಕರಿಸಿದ್ದಾರೆ. ಅವರು ಮುಂದುವರಿದು, `ಇದು ನನ್ನ ಮಾನಹಾನಿಯ ಸಂಚಾಗಿದೆ. ನನ್ನ ವಿರುದ್ಧ ಆಧಾರ ರಹಿತವಾಗಿ ಆರೋಪಿಸುತ್ತಿದ್ದಾರೆ. ಸತ್ಯಕ್ಕೆ ಜಯವಿದೆ. ನಾನು ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ. ನನ್ನ ಮಾನಹಾನಿ ಮಾಡುವ ಮೂಲಕ ಯಾರಾದರೂ ಚುನಾವಣೆಯಲ್ಲಿ ಲಾಭ ಪಡೆಯಲು ಬಯಸಿದರೆ, ದೇವರು ಅವರಿಗೆ ಆಶೀರ್ವದಿಸಲಿ. ನಾನು ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧದ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ’, ಎಂದು ಹೇಳಿದ್ದಾರೆ.