Bengal Governor CV Bose : ಬಂಗಾಳದಲ್ಲಿ ಸಾವಿನ ನಗ್ನ ನರ್ತನೆ ನಡೆಯುತ್ತಿದೆ!

  • ಲೋಕಸಭೆ ಚುನಾವಣೆಯ ನಂತರ ಬಂಗಾಳದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ

  • ಸಂತ್ರಸ್ತರು ರಾಜ್ಯಪಾಲರನ್ನು ಭೇಟಿಯಾಗದಂತೆ ತಡೆದಿದ್ದಕ್ಕೆ ರಾಜ್ಯಪಾಲರ ಅಸಮಾಧಾನ !

ರಾಜ್ಯಪಾಲ ಸಿ.ವಿ. ಆನಂದ ಬೋಸ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ನಂತರ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್‌ನ ಗೂಂಡಾ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಇಂತಹ ಸಂತ್ರಸ್ತ ಕಾರ್ಯಕರ್ತರ ಕುಟುಂಬಗಳನ್ನು ನಿರಾಶ್ರಿತರ ಶಿಬಿರಗಳಲ್ಲಿ ಇರಿಸಬೇಕಾಗಿದೆ. ಸಂತ್ರಸ್ತ ಕಾರ್ಯಕರ್ತರು ರಾಜ್ಯಪಾಲರನ್ನು ಭೇಟಿ ಮಾಡಲು ಕೋಲಕಾತಾದ ರಾಜಭವನಕ್ಕೆ ತೆರಳಿದಾಗ ಅವರನ್ನು ಪೊಲೀಸರು ತಡೆದರು. ಪೊಲೀಸರು ರಾಜಭವನ ಆವರಣದಲ್ಲಿ ಈ ಮೊದಲೇ ಗುಂಪು ಗೂಡುವಿಕೆಯನ್ನು ನಿರ್ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಸಿ.ವಿ. ಆನಂದ ಬೋಸ ಅವರು ಜೂನ್ 14 ರಂದು ಪತ್ರಿಕಾಗೋಷ್ಠಿ ನಡೆಸಿ ತೃಣಮೂಲ ಕಾಂಗ್ರೆಸ್ ಸರಕಾರದ ಸರ್ವಾಧಿಕಾರಿ ಕಾರ್ಯವೈಖರಿಯನ್ನು ಟೀಕಿಸಿದರು. ಅವರು ಮಾತನಾಡಿ, ರಾಜ್ಯದಲ್ಲಿ ಸಾವಿನ ನಗ್ನ ನರ್ತನ ನಡೆಯುತ್ತಿದೆ. ರಾಜ್ಯದಲ್ಲಿ ಅನೇಕ ಭಾಗಗಳಲ್ಲಿ ಹತ್ಯೆ ನಡೆಯುತ್ತಿದ್ದು, ರಾಜ್ಯ ಸರಕಾರ ಹಿಂಸಾಚಾರ ಸಂತ್ರಸ್ತರನ್ನು ರಾಜಭವನಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ನಾನು ಈ ಎಲ್ಲ ಸಂತ್ರಸ್ತರನ್ನು ರಾಜಭವನಕ್ಕೆ ಬಂದು ಭೇಟಿಯಾಗಲು ಲಿಖಿತ ಅನುಮತಿ ನೀಡಿದ್ದರೂ ಸಹ, ಅವರನ್ನು ರಾಜಭವನಕ್ಕೆ ಬರದಂತೆ ತಡೆಯಲಾಗಿದೆ. ಈ ಎಲ್ಲ ಜನರಿಗೆ ಯಾವುದೋ ಕಾರಣವನ್ನು ಹೇಳಿ ಅವರನ್ನು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳಿಂದ ವಂಚಿತಗೊಳಿಸಿದ್ದಾರೆಂದು ತಿಳಿದು ನನಗೆ ಆಘಾತವಾಯಿತು ಎಂದು ಖೇದ ವ್ಯಕ್ತಪಡಿಸಿದರು.

ರಾಜ್ಯಪಾಲರು ತಮ್ಮ ಮಾತನ್ನು ಮುಂದುವರಿಸಿ, ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ನಾನು ನನ್ನ ಕಣ್ಣಾರೆ ಹಿಂಸಾಚಾರವನ್ನು ಕಂಡಿದ್ದೇನೆ. ನಾನು ರಾಜ್ಯದ ಹಲವೆಡೆ ಭೇಟಿ ನೀಡಿದ್ದೆ. ಈ ಚುನಾವಣೆಯಲ್ಲಿಯೂ ಗಲಭೆ, ಹತ್ಯೆ, ಬೆದರಿಕೆಯಂತಹ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಇದು ಹೀಗೆಯೇ ಮುಂದುವರಿಸಲು ಸಾಧ್ಯವಿಲ್ಲ. ಬಡವರು ತಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಬಂದಾಗ ಅವರನ್ನು ತಡೆದಿರುವುದು ಎಲ್ಲಕ್ಕಿಂತ ಬೇಸರದ ಸಂಗತಿಯಾಗಿದೆ. ನಾನು ಜನತೆಯ ರಾಜ್ಯಪಾಲನಾಗಲು ಬಯಸುತ್ತೇನೆ. ಆದ್ದರಿಂದ ನಾನು ಜನರನ್ನು ಭೇಟಿಯಾಗುತ್ತೇನೆ, ಅವರೊಂದಿಗೆ ಸಮಯ ಕಳೆಯುತ್ತೇನೆ. ಸರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಸರಕಾರ ತನ್ನ ಜವಾಬ್ದಾರಿಗಳನ್ನು ನಿರ್ವಹಿಸದಿದ್ದರೆ, ಸಂವಿಧಾನ ತನ್ನ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು, `ಅನುಮತಿ ನೀಡಿದ್ದರೂ ಸಹ ಪೊಲೀಸರು ವಿರೋಧ ಪಕ್ಷದ ಮುಖಂಡರಾದ ಸುವೇಂದು ಅಧಿಕಾರಿ ಮತ್ತು ಸಂತ್ರಸ್ತರನ್ನು ರಾಜಭವನಕ್ಕೆ ಬರುವುದನ್ನು ಯಾವ ಆಧಾರದಲ್ಲಿ ತಡೆದಿದ್ದೀರಿ?‘ ಎಂದು ಪ್ರಶ್ನಿಸಿದ್ದೆ. ಕಲಂ 167 ಅನುಸಾರ ಮುಖ್ಯಮಂತ್ರಿಗಳಿಗೆ ಯಾವುದಾದರೂ ಮಾಹಿತಿ ಕೇಳಿದರೆ, ಮುಖ್ಯಮಂತ್ರಿ ಅದನ್ನು ನೀಡಬೇಕಾಗುತ್ತದೆ. ರಾಜ್ಯಪಾಲರಿಗೆ ಇದರ ಅಧಿಕಾರವಿದೆ ಎಂದು ಸಂವಿಧಾನದಲ್ಲಿ ಹೇಳಲಾಗಿದೆ.

ರಾಜ್ಯಪಾಲರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ? – ಸರಕಾರಕ್ಕೆ ಪ್ರಶ್ನಿಸಿದ ಕೋಲಕಾತಾ ಉಚ್ಚ ನ್ಯಾಯಾಲಯ

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಇನ್ನೊಬ್ಬ ವ್ಯಕ್ತಿಯು ಈ ಬಗ್ಗೆ ಪೊಲೀಸರ ವಿರುದ್ಧ ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನಡೆಸುವಾಗ, ಉಚ್ಚ ನ್ಯಾಯಾಲಯವು ಬಂಗಾಳದ ಅಡ್ವೊಕೇಟ್ ಜನರಲ್ ಅವರನ್ನು ‘ರಾಜ್ಯಪಾಲರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ?, ಹಾಗಿದ್ದರೆ, ಇವರನ್ನು ರಾಜಭವನಕ್ಕೆ ಹೋಗಿ ರಾಜ್ಯಪಾಲರನ್ನು ಭೇಟಿಯಾಗಲು ಏಕೆ ಬಿಡಲಿಲ್ಲ?’ ಎಂದು ಪ್ರಶ್ನಿಸಿತು. ತದನಂತರ ನ್ಯಾಯಾಲಯವು ರಾಜಭವನವು ಅನುಮತಿಸಿದರೆ, ಸುವೇಂದು ಅಧಿಕಾರಿ ಮತ್ತು ಹಿಂಸಾಚಾರ ಸಂತ್ರಸ್ತರಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶ ನೀಡಿತು.

ಸಂಪಾದಕೀಯ ನಿಲುವು

  • ಬಂಗಾಳದಲ್ಲಿ ರಾಜ್ಯಪಾಲರ ಸ್ಥಿತಿ ಈ ರೀತಿಯಾಗಿದ್ದರೆ, ಸಾಮಾನ್ಯ ನಾಗರಿಕರ ಸ್ಥಿತಿ ಏನಾಗಿರಬಹುದು ಎಂದು ಊಹಿಸಬಹುದು! ಇಷ್ಟೆಲ್ಲಾ ಆದರೂ ಕೂಡ ರಾಜ್ಯಪಾಲರು ಬಂಗಾಳ ಸರಕಾರವನ್ನು ವಿಸರ್ಜಿಸಲು ಶಿಫಾರಸು ಮಾಡುವುದಿಲ್ಲ, ಕೇಂದ್ರ ಸರಕಾರವೂ ಮುಂದಾಳತ್ವ ವಹಿಸುತ್ತಿಲ್ಲ !
  • ಬಂಗಾಳದಲ್ಲಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವವಾದಿಗಳ ಹತ್ಯೆಯ ನೂರಾರು ಘಟನೆಗಳು ನಡೆದಿವೆ, ಆದರೂ ಕೂಡ ದೇಶದ ಒಂದೇ ಒಂದು ಪ್ರಜಾಪ್ರಭುತ್ವವನ್ನು ಕೊಂಡಾಡುವ ರಾಜಕೀಯ ಪಕ್ಷ, ಪ್ರಗತಿಪರ, ನಿಧರ್ಮಿವಾದಿ ಸಂಘಟನೆಗಳು, ಪತ್ರಕರ್ತರು ಈ ಬಗ್ಗೆ ಧ್ವನಿಯೆತ್ತುತ್ತಿಲ್ಲ .