PM Modi Oath Ceremony : ಇಂದು ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ !

  • ಮೂರನೇ ಬಾರಿಗೆ ಪ್ರಧಾನಮಂತ್ರಿ ಹುದ್ದೆಯ ಪ್ರಮಾಣ ವಚನ !

  • ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಆಹ್ವಾನವಿಲ್ಲ!

  • ಮಾಲ್ಡೀವ್ಸ್ ಅಧ್ಯಕ್ಷರು ಉಪಸ್ಥಿತರಿರುವರು !

  • ಸಮಾರಂಭಕ್ಕೆ 8 ಸಾವಿರ ಗಣ್ಯರು ಉಪಸ್ಥಿತರಿರುವರು !

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಮಾಲ್ಡೀವ್ಸ್, ಸೆಶೆಲ್ಸ್, ಬಾಂಗ್ಲಾದೇಶ, ಮಾರಿಷಸ್, ನೇಪಾಳ, ಭೂತಾನ ಮುಂತಾದ ದೇಶಗಳ ನಾಯಕರನ್ನು ಆಹ್ವಾನಿಸಲಾಗಿದೆ; ಆದರೆ ಪಾಕಿಸ್ತಾನವನ್ನು ನಿರ್ಲಕ್ಷಿಸಲಾಗಿದೆ. 2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾದಾಗ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ 2019ರಲ್ಲಿ ಪಾಕಿಸ್ತಾನಕ್ಕೆ ಆಹ್ವಾನ ನೀಡಿರಲಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 8 ಸಾವಿರ ಗಣ್ಯರು ಉಪಸ್ಥಿತರಿರುವರು.

ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರದ ಭದ್ರತಾ ವ್ಯವಸ್ಥೆ

1. ದೆಹಲಿಯಲ್ಲಿ ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ‘ಜಿ-20’ ಪರಿಷತ್ತನ್ನು ಆಯೋಜಿಸಲಾಗಿತ್ತು. ಅದರಂತೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾರ್ಯಕ್ರಮಕ್ಕೆ ತೀವ್ರ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ.

2. ಬಿಗಿ ಭದ್ರತೆಗಾಗಿ ನಗರದಲ್ಲಿ ಕಲಂ 144 ಜಾರಿಗೊಳಿಸಲಾಗಿದೆ. ಜೂನ್ 10ರವರೆಗೆ ನಗರದಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.

3. ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನದಂದು ಅಂದರೆ ಜೂನ್ 9 ರಂದು ದೆಹಲಿಯನ್ನು ‘ನೊ ಫ್ಲೈಯಿಂಗ್ ಝೋನ್’ (ವಿಮಾನ ಸಂಚಾರ ನಿಷೇಧಿಸಲಾಗಿದೆ) ಎಂದು ಘೋಷಿಸಲಾಗಿದೆ. ಈ ದಿನ ರಾಜಧಾನಿಯಲ್ಲಿ ಯಾವುದೇ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಹಾರಿಸಲು ಸಾಧ್ಯವಿಲ್ಲ.

4. ಭದ್ರತಾ ವ್ಯವಸ್ಥೆಗಾಗಿ, ದೆಹಲಿ ಪೊಲೀಸರು, ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ, ಗುಪ್ತಚರ ಇಲಾಖೆ, ಭದ್ರತಾ ಪಡೆಗಳ ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್ ಮತ್ತು ಎನ್.ಡಿ.ಆರ್.ಎಫ್. ಪಡೆಗಳನ್ನು ನಿಯೋಜಿಸಲಾಗಿದೆ.