ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹೇಳಿಕೆ
ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದಿಂದ ವಿವಿಧ ಹೇಳಿಕೆಗಳು ಮತ್ತು ಅನೇಕ ಅಡಚಣೆಗಳಿದ್ದರೂ ಸಹ ನಾವು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇವೆ. ನಾವು ಜಮ್ಮು ಮತ್ತು ಕಾಶ್ಮೀರದ ವಿವಾದದ ಜೊತೆಗೆ ಭಾರತದೊಂದಿಗಿನ ಎಲ್ಲ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಲು ಸಿದ್ಧರಾಗಿದ್ದೇವೆ. ನಾವು ಶಾಂತಿಯುತವಾಗಿ ಒಟ್ಟಿಗೆ ಮುಂದುವರಿಯುತ್ತೇವೆ ಎಂದು ನಂಬುತ್ತೇವೆ. ನಮಗೆ ಭಾರತದೊಂದಿಗೆ ಉತ್ತಮ ಸಂಬಂಧ ಬೇಕಾಗಿದೆ. ಉಭಯ ದೇಶಗಳ ನಡುವೆ ಶಾಂತಿ ಕಾಪಾಡಲು ಭಾರತವೂ ಪ್ರಯತ್ನಗಳನ್ನು ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಜ್ ಜರ್ರಾ ಬಲೋಚ್ ಹೇಳಿದ್ದಾರೆ. ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಸ್ಥಾಪನೆಯಾಗುತ್ತಿರುವ ಹಿನ್ನಲೆಯಲ್ಲಿ ಅವರು ಮಾತನಾಡುತ್ತಿದ್ದರು.
1. ಈ ಹಿಂದೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಲೋಕಸಭೆ ಚುನಾವಣೆಯ ನಂತರ ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವ ಆಶಯವನ್ನು ವ್ಯಕ್ತಪಡಿಸಿದ್ದರು. ಭಾರತ-ಪಾಕಿಸ್ತಾನ ಸಂಬಂಧಗಳು ತಮ್ಮದೇ ಆದ ವಿಶೇಷ ಇತಿಹಾಸವನ್ನು ಹೊಂದಿವೆ . ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಂತರ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
2. ಮಾರ್ಚ್‌ನಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು, ಪಾಕಿಸ್ತಾನದ ವ್ಯಾಪಾರ ಸಮುದಾಯವು ಭಾರತದೊಂದಿಗೆ ವ್ಯಾಪಾರವನ್ನು ಪುನರಾರಂಭಿಸಲು ಬಯಸುತ್ತದೆ ಎಂದು ಹೇಳಿದ್ದರು. ಈ ಸಮಸ್ಯೆಯ ಕುರಿತು ಸಂಬಂಧಪಟ್ಟವರಿಂದ ಸಲಹೆ ಪಡೆದು ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದರು.
3. ಇನ್ನೊಂದೆಡೆ ಲೋಕಸಭೆ ಚುನಾವಣೆಯ ತೀರ್ಪು ಬರುವ ಕೆಲ ದಿನಗಳ ಮೊದಲು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ, ‘ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ಸೋಲಬೇಕು. ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರೂ ಇದನ್ನೇ ಬಯಸುತ್ತಾರೆ. ಎರಡೂ ದೇಶಗಳಲ್ಲಿ ಉಗ್ರರು ಕಡಿಮೆಯಾದಾಗ ಮಾತ್ರ ಭಾರತ-ಪಾಕಿಸ್ತಾನ ಸಂಬಂಧ ಸುಧಾರಿಸುತ್ತದೆ’ ಎಂದು ಹೇಳಿದ್ದರು. (ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆಯೇ ಹೊರತು ಭಾರತದಲ್ಲಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವುಭಾರತದಲ್ಲಿ ಜಿಹಾದಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸುವ ಮೂಲಕ ಪಾಕಿಸ್ತಾನವೇ ಈ ಸಂಬಂಧವನ್ನು ಕೆಡಿಸಿದೆ. ಪಾಕಿಸ್ತಾನಕ್ಕೆ ನಿಜವಾಗಿಯೂ ಭಾರತದೊಂದಿಗೆ ಉತ್ತಮ ಸಂಬಂಧ ಬೇಕಾಗಿದ್ದರೆ, ಅದು ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಿ, ಎಲ್ಲ ಭಯೋತ್ಪಾದಕರನ್ನು ಭಾರತದ ಸ್ವಾಧೀನಕ್ಕೆ ಒಪ್ಪಿಸಬೇಕು. ಅಷ್ಟೇ ಅಲ್ಲ ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ರಕ್ಷಿಸಬೇಕು. |