Modi PM 2024 : ಜೂನ್ 8 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ !

ನರೇಂದ್ರ ಮೋದಿ

ನವ ದೆಹಲಿ – ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ (ಎನ್‌.ಡಿ.ಎ.) ಬಹುಮತ ಗಳಿಸಿದೆ. ‘ಎನ್‌.ಡಿ.ಎ.’ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ದೆಹಲಿಯಲ್ಲಿ ತೀವ್ರ ಸ್ವರೂಪದ ಸಭೆ ನಡೆಯುತ್ತಿದೆ. ಅಧಿಕೃತ ಮೂಲಗಳ ಪ್ರಕಾರ ಜೂನ್ 8 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗಿದೆ.

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಪದವಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರ ಹೆಸರಿನಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ. ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗುವ ಅವರು ದೇಶದ ಎರಡನೇ ನಾಯಕರಾಗಲಿದ್ದಾರೆ. ಈ ಹಿಂದೆ ಈ ದಾಖಲೆ ಕಾಂಗ್ರೆಸ್‌ನ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದೆ. ಜೂನ್ 5 ರಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ದ ಸಭೆ ನಡೆಯಿತು. ಈ ಸಭೆಯಲ್ಲಿ ಜನತಾ ದಳದ (ಸಂಯುಕ್ತ) ಮುಖ್ಯಸ್ಥ ನಿತೀಶ್ ಕುಮಾರ್, ತೆಲುಗು ದೇಸಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಇತರ ನಾಯಕರು ಭಾಗವಹಿಸಿದ್ದರು. ಮಿತ್ರಪಕ್ಷಗಳ ಜತೆಗಿನ ಚರ್ಚೆಯ ನಂತರ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಿತು. ಇದರಲ್ಲಿ ಸರ್ಕಾರ ರಚನೆಯ ರೂಪುರೇಷೆ ಹಾಗೂ ಪ್ರಮಾಣ ವಚನ ಸಮಾರಂಭದ ಕುರಿತು ಚರ್ಚೆ ನಡೆಸಲಾಯಿತು.

2019 ರ ಫಲಿತಾಂಶದ ನಂತರ, ಪ್ರಧಾನಿ ಪ್ರಮಾಣ ವಚನ ಸಮಾರಂಭವು 7 ದಿನಗಳ ನಂತರ ನಡೆದಿದ್ದರೆ, 2014 ರಲ್ಲಿ 10 ದಿನಗಳ ನಂತರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಎನ್‌.ಡಿ.ಎ.’ 292 ಸ್ಥಾನಗಳನ್ನು ಗೆದ್ದಿದ್ದರೆ, ‘ಇಂಡೀ’ ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದಿದೆ.