Patanjali : ಪತಂಜಲಿಯ ಸೋನ್ ಪಾಪಡಿ ಕಳಪೆ ಗುಣಮಟ್ಟ; 3 ಜನರಿಗೆ 6 ತಿಂಗಳ ಜೈಲು ಶಿಕ್ಷೆ

ಪಿಥೋರಾಗಡ್ (ಉತ್ತರಾಖಂಡ) – ಯೋಗ ಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ಸೋನ್ ಪಾಪಡಿ ಪದಾರ್ಥವು ಗುಣಮಟ್ಟದ ಪರೀಕ್ಷೆಯಲ್ಲಿ ಕಳಪೆಯಾಗಿದೆಯೆಂದು ಕಂಡು ಬಂದಿರುವುದರಿಂದ ಉತ್ತರಾಖಂಡದ ಪಿಥೋರಾಗಡದ ನ್ಯಾಯಾಧೀಶರು ಪತಂಜಲಿ ಆಯುರ್ವೇದ ಲಿಮಿಟೆಡ್’ ಈ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಸೇರಿದಂತೆ 3 ಜನರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ಆಹಾರ ಸುರಕ್ಷತಾ ನಿರೀಕ್ಷಕರು 2019 ರಲ್ಲಿ, ಉತ್ತರಾಖಂಡದ ಬೇರಿನಾಗ್, ರುದ್ರಪುರ, ಉಧಮ್ ಸಿಂಗ್ ನಗರ ಮತ್ತು ಉತ್ತರಾಖಂಡದ ಕೆಲವು ಅಂಗಡಿಗಳಿಂದ ಪತಂಜಲಿಯ ಸೋನ್ ಪಾಪಡಿಯ ಮಾದರಿಗಳನ್ನು ಸಂಗ್ರಹಿಸಿದ್ದರು. ಆಹಾರ ಮತ್ತು ಔಷಧ ನಿರ್ದೇಶನಾಲಯದ ಪ್ರಯೋಗಶಾಲೆಯಲ್ಲಿ ಈ ಸೋನ್ ಪಾಪಡಿಯನ್ನು ತಪಾಸಣೆ ನಡೆಸಲಾಯಿತು. ಈ ಪ್ರಯೋಗಶಾಲೆಯು ಡಿಸೆಂಬರ್ 2020 ರಲ್ಲಿ ರಾಜ್ಯದ ಆಹಾರ ಭದ್ರತಾ ಇಲಾಖೆಗೆ ಪತಂಜಲಿಯ ಸೋನ್ ಪಾಪಡಿಯು ಕಳಪೆ ಗುಣಮಟ್ಟದ್ದಾಗಿದೆ ಎಂಬ ವರದಿಯನ್ನು ಕಳುಹಿಸಿತು. ತದ ನಂತರ, ಉದ್ಯಮಿ ಲೀಲಾಧರ ಪಾಠಕ್, ವಿತರಕ ಅಜಯ್ ಜೋಷಿ ಮತ್ತು ಪತಂಜಲಿ ಸಹಾಯಕ ನಿರ್ವಾಹಕ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.