Indian Students Attacked: ಕಿರ್ಗಿಸ್ತಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ

ಬಿಶ್ಕೆಕ್‌ (ಕಿರ್ಗಿಸ್ತಾನ್) – ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ಮೇ 17 ರ ರಾತ್ರಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ಈ ಎಲ್ಲ ವಿದ್ಯಾರ್ಥಿಗಳು ಇಲ್ಲಿನ 4 ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ದಾಳಿಯಲ್ಲಿ, ಭಾರತೀಯ ವಿದ್ಯಾರ್ಥಿಗಳು ಒಂದು ಕೆಫೆಯಲ್ಲಿ ಅಡಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು.  ಭಾರತೀಯ ವಿದ್ಯಾರ್ಥಿಗಳ ಪೈಕಿ ಯಾರಿಗೂ ಗಾಯಗಳಾಗಿಲ್ಲ; ಆದರೆ 4 ಪಾಕಿಸ್ತಾನಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದರೊಂದಿಗೆ ಬಾಂಗ್ಲಾದೇಶದ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ಗುಂಪು ದಾಳಿಯಲ್ಲಿ 3 ಪಾಕಿಸ್ತಾನಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಕಿರ್ಗಿಸ್ತಾನದಲ್ಲಿ 15 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಮೇ 13 ರಂದು ಸ್ಥಳೀಯ ಯುವಕನು ಈಜಿಪ್ಟ್ ನ ಓರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದನು. ಇದರಿಂದಾಗಿ ಈಜಿಪ್ಟ್ ವಿದ್ಯಾರ್ಥಿಗಳು ಈ ಯುವಕನನ್ನು ಥಳಿಸಿದ್ದರು. ಇದರಲ್ಲಿ ಸ್ಥಳೀಯನೊಬ್ಬನ ಸಾವಾಗಿದೆ ಎಂಬ ವದಂತಿ ಹರಡಿತು. ಅದರ ಸೇಡು ತೀರಿಸಿಕೊಳ್ಳಲು ಯುವಕರು ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ನಂತರ, ಭಾರತವು ಭಾರತೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಿಂದ ಹೊರಬರದಂತೆ ಸಲಹೆ ನೀಡಿದೆ.