Nepal Bans Indian Spices: ಈಗ ನೇಪಾಳದಲ್ಲಿ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮೇಲೆ ನಿಷೇಧ !

ಕಾಠ್ಮಂಡು (ನೇಪಾಳ) – ಹಾಂಗ್ ಕಾಂಗ್ ಮತ್ತು ಸಿಂಗಾಪುರ ನಂತರ, ನೆರೆಯ ನೇಪಾಳ ಕೂಡ ಭಾರತದ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮಾರಾಟವನ್ನು ನಿಷೇಧಿಸಿದೆ. ನೇಪಾಳದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಈ ಸಂಸ್ಥೆಗಳ ಮಸಾಲೆಗಳಲ್ಲಿ ‘ಎಥಿಲೀನ್ ಆಕ್ಸೈಡ್’ ಎಂಬ ಕೀಟನಾಶಕವಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಬಳಿಕ ಈ ಎರಡು ಮಸಾಲೆಗಳ ಮಾರಾಟ, ಸಂಗ್ರಹಣೆ ಮತ್ತು ಆಮದನ್ನು ನಿಷೇಧಿಸಲು ನೇಪಾಳವು ನಿರ್ಣಯ ತೆಗೆದುಕೊಂಡಿದೆ.

1. ನೇಪಾಳದ ಆಹಾರ ತಂತ್ರಜ್ಞಾನ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹಾರಾಜ್ ಇವರು, ಎರಡೂ ಮಸಾಲೆ ಪದಾರ್ಥಗಳ ತಪಾಸಣೆ ನಡೆಸಲಾಗುತ್ತಿದ್ದು, ವರದಿ ಬರುವವರೆಗೂ ನಿಷೇಧ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

2. ಅಮೇರಿಕಾ, ಬ್ರಿಟನ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ಹಿಂದೆಯೇ ಮಸಾಲೆಗಳ ತಪಾಸಣೆಗೆ ಆದೇಶಿಸಿವೆ. ಬ್ರಿಟನ್ ನ ಆಹಾರ ಸುರಕ್ಷಾ ಇಲಾಖೆಯು ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಮಸಾಲೆಗಳ ತಪಾಸಣೆಗೆ ನಿರ್ದೇಶನ ನೀಡಿದೆ.