ದಿವಾಳಿತನದ ಅಂಚಿನಲ್ಲಿ ಪಾಕ್; ಎಲ್ಲಾ ಸರ್ಕಾರಿ ಸಂಸ್ಥೆಗಳ ಮಾರಾಟ !

ಇಸ್ಲಾಮಾಬಾದ್ (ಪಾಕಿಸ್ತಾನ) – ವ್ಯಾಪಾರ ಮಾಡುವುದು ಸರ್ಕಾರದ ಕೆಲಸವಲ್ಲ. ದೇಶದಲ್ಲಿ ವ್ಯಾಪಾರ ಮತ್ತು ಉತ್ತಮ ಲಾಭದಾಯಕ ವಾತಾವರಣವನ್ನು ಒದಗಿಸುವುದು ನಮ್ಮ ಸರಕಾರದ ಕೆಲಸವಾಗಿದೆ, ಎಂದು ಹೇಳುವ ಮೂಲಕ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಘೋಷಿಸಿದ್ದಾರೆ. ವ್ಯಾಪಾರ ಮತ್ತು ಹೂಡಿಕೆಗಾಗಿ ನಡೆದ ಖಾಸಗೀಕರಣ ಆಯೋಗದ ಸಭೆಯಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಈ ಘೋಷಣೆ ಮಾಡಿದರು. ಪಾಕಿಸ್ತಾನದ ಹಣಕಾಸು ಸಚಿವಾಲಯದ ಡಿಸೆಂಬರ್ 2023 ರ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ 88 ಸರ್ಕಾರಿ ಸಂಸ್ಥೆಗಳಿವೆ.

ಪ್ರಧಾನಿ ಶಹಬಾಜ್ ಷರೀಫ್ ಮಾತನಾಡಿ, ಎಲ್ಲಾ ಸರ್ಕಾರಿ ಸಂಸ್ಥೆಗಳು ಲಾಭದಲ್ಲಿರಲಿ ಅಥವಾ ಇಲ್ಲದಿರಲಿ ಅವನ್ನು ಮಾರಾಟ ಮಾಡಲಾಗುವುದು. ಆಯಕಟ್ಟಿನ ಪ್ರಮುಖ ಸಂಸ್ಥೆಗಳನ್ನು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿರುವ ಸಂಸ್ಥೆಗಳನ್ನು ಮಾತ್ರ ಸರ್ಕಾರ ಖಾಯಂ ಅಗಿ ನಿರ್ವಹಿಸುವುದು. ಈ ಪ್ರಕ್ರಿಯೆ ಸುಲಭವಾಗಿ ನಡೆಯಲು ಖಾಸಗೀಕರಣ ಆಯೋಗದೊಂದಿಗೆ ಸಹಕರಿಸುವಂತೆ ಎಲ್ಲಾ ಸಚಿವರುಗಳಿಗೆ ಪ್ರಧಾನಿ ಮನವಿ ಮಾಡಿದರು.

ಈ ಸಂಸ್ಥೆಗಳ ಹರಾಜಿಗೆ ನಿರ್ಣಯ !

ಸಂಸ್ಥೆಗಳ ಮಾರಾಟ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲಾಗುವುದು, ಎಂದು ಪ್ರಧಾನಿ ಶಹಬಾಜ್ ಷರೀಫ್ ತಿಳಿಸಿದ್ದಾರೆ. ಮೊದಲನೆಯದಾಗಿ, ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ ಲೈನ್ಸ್’ ಸಂಸ್ಥೆಯ ಖಾಸಗೀಕರಣಗೊಳಿಸಲಾಗುವುದು. ಇದರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಮತ್ತು ಟಿವಿಯಲ್ಲಿ ಅದರ ನೇರ ಪ್ರಸಾರ ಮಾಡಲಾಗುವುದು ಎಂದು ಷರೀಫ್ ತಿಳಿಸಿದ್ದಾರೆ.