ಗುಜರಾತ: ನೌಕೆಯಿಂದ ೬೦ ಕೋಟಿ ರೂಪಾಯಿಯ ೧೭೬ ಕೆಜಿ ಮಾದಕ ಪದಾರ್ಥ ವಶ

ಕಳೆದ ೩ ದಿನಗಳಲ್ಲಿ ಗುಜರಾತ್ ನಿಂದ ೮೯೦ ಕೋಟಿ ರೂಪಾಯಿಯ ಮಾದಕ ಪದಾರ್ಥಗಳು ವಶ

ಕರ್ಣಾವತಿ(ಗುಜರಾತ) – ಭಾರತೀಯ ಕರಾವಳಿ ಕಾವಲು ಪಡೆಯಿಂದ ಗುಜರಾತಿದಲ್ಲಿನ ಪೋರಬಂದರ್ ಹತ್ತಿರದ ಸಮುದ್ರದಲ್ಲಿ ಭಾರತೀಯ ನೌಕೆಯೊಂದರಿಂದ ೬೦ ಕೋಟಿ ರೂಪಾಯಿಯ ೧೭೩ ಕೆಜಿ ‘ಹಶಿಶ್ ‘ ಎಂಬ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿನ ಪಸನಿ ಬಂದರದಿಂದ ಈ ಮಾದಕ ಪದಾರ್ಥ ತರಲಾಗಿದೆ. ಈ ಪ್ರಕರಣದಲ್ಲಿ ತುಕಾರಾಂ ಆರೋಟೆ ಅಲಿಯಾಸ್ ಸಾಹು ಮತ್ತು ಹರಿದಾಸ್ ಕುಲಾಲ್ ಅಲಿಯಾಸ್ ಪುರಿ ಎಂಬವರನ್ನು ಕರಾವಳಿ ಕಾವಲು ಪಡೆ ವಶಪಡಿಸಿಕೊಂಡು ಗುಜರಾತ್ ಉಗ್ರ ನಿಗ್ರಹ ತಂಡಕ್ಕೆ ಒಪ್ಪಿಸಿದೆ. ಇಬ್ಬರೂ ಕೂಡ ಮಹಾರಾಷ್ಟ್ರದ ನಿವಾಸಿಗಳಾಗಿದ್ದಾರೆ. ಕಳೆದ ೩ ದಿನದಲ್ಲಿ ಗುಜರಾತಿನಲ್ಲಿ ೮೯೦ ಕೋಟಿ ರೂಪಾಯಿಯ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

೧. ಗುಜರಾತ್ ಉಗ್ರ ನಿಗ್ರಹ ತಂಡವು ಏಪ್ರಿಲ್ ೨೮ ರಂದು ಮಹಾರಾಷ್ಟ್ರದಲ್ಲಿನ ಕೈಲಾಸ ಸಾನಪ ಮತ್ತು ದತ್ತ ಅಂಧಳೆ ಎಂಬವರನ್ನು ದ್ವಾರಕಾ ನಗರದಲ್ಲಿ ಬಂಧಿಸಿತ್ತು, ಹಾಗೂ ಅಲಿ ಅಸಗರ್ ಅಲಿಯಾಸ್ ಆರಿಫ್ ಬಿದಾನ್ ಎಂಬವನನ್ನು ಮಾಂಡವಿ ಯಿಂದ ಬಂಧಿಸಲಾಗಿತ್ತು. ಈ ಐದು ಜನರು ಪಾಕಿಸ್ತಾನದಲ್ಲಿರುವ ಮಾದಕ ಪದಾರ್ಥಗಳ ಮಾಫಿಯಾ ಫಿದಾ ಎಂಬವನ ಸಂಪರ್ಕದಲ್ಲಿದ್ದರು.

೨. ಮಾದಕ ಪದಾರ್ಥ ನಿಯಂತ್ರಣ ಇಲಾಖೆ (ಎನ್ ಸಿಬಿ) ಮತ್ತು ಗುಜರಾತ ಉಗ್ರ ನಿಗ್ರಹ ತಂಡವು ಅಂತರರಾಜ್ಯ ಮಾದಕ ಪದಾರ್ಥಗಳ ಸಾಗಾಣಿಕೆ ಪ್ರಕರಣದಲ್ಲಿ ಇನ್ನೂ ೬ ಜನರನ್ನು ರಾಜಸ್ಥಾನದಿಂದ ಬಂಧಿಸಿದೆ. ಹಾಗೂ ಸಿರೋಹಿ ಜಿಲ್ಲೆಯಲ್ಲಿ ೪೫ ಕೋಟಿ ರೂಪಾಯಿಯ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.