ಗಣಕಯಂತ್ರದ ಯುಗ ಆರಂಭವಾದಾಗ ಗಣಕಯಂತ್ರದ ಆಕಾರ ಬಹಳ ದೊಡ್ಡದಾಗಿತ್ತು, ಅಂದರೆ ಒಂದು ಕೋಣೆಯಷ್ಟು ದೊಡ್ಡದಾಗಿತ್ತು. ಅನಂತರ ಹಂತಹಂತವಾಗಿ ಅದು ಸಣ್ಣದಾಯಿತು. ಅದೇ ಪರಿಣಾಮ ಮಾಹಿತಿಯನ್ನು ಸಂಗ್ರಹಿಸಿಡುವ ಉಪಕರಣಗಳ ವಿಷಯದಲ್ಲಿಯೂ ಆಯಿತು. ಮಾಹಿತಿ ಸಂಗ್ರಹಿಸುವ ಡಿಸ್ಕ್‌ನ ಆಕಾರ ಪ್ರಾರಂಭದಲ್ಲಿ ದೊಡ್ಡದಾಗಿತ್ತು. ಈಗ ಅದು ಸಣ್ಣದಾಗುತ್ತಾ ಒಂದು ಸಣ್ಣ ‘ಚಿಪ್’ನಷ್ಟಾಗಿದೆ. ಕೆಮೆರಾಗಳು ಈಗ ಒಂದು ಲೇಖನಿಯಲ್ಲಿಯೂ ಲಭ್ಯವಿವೆ. ಇಲೆಕ್ಟ್ರಾನಿಕ್ ಉಪಕರಣಗಳ ಆಕಾರ ಬದಲಾವಣೆಯಾಗಲು ‘ಸೆಮಿಕಂಡಕ್ಟರ್’ ಕಾರಣವಾಗಿದೆ. ಈ ವಿಷಯವನ್ನು ನಾವು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಮೆದುಳಿನಂತೆ ಕಾರ್ಯ ಮಾಡುವ ಭಾಗವೇ ‘ಸೆಮಿಕಂಡಕ್ಟರ್’
ಯಾವುದಾದರೊಂದು ಇಲೆಕ್ಟ್ರಾನಿಕ್ ಸರ್ಕಿಟ್‌ನ ವಿಚಾರ ಮಾಡಿದರೆ ಅದರಲ್ಲಿ ಒಂದು ‘ಕಂಡಕ್ಟರ್’, ಅಂದರೆ ವಿದ್ಯುತ್ ವಾಹಕ ಇರುತ್ತದೆ ಹಾಗೂ ಇನ್ನೊಂದು ‘ರೆಸಿಸ್ಟರ್’ ಅಂದರೆ ಪ್ರತಿರೋಧಕ ಇರುತ್ತದೆ. ಎರಡೂ ಸೇರಿ ಒಂದು ಸರ್ಕಿಟ್ ಆಗುತ್ತದೆ. ಯಾವುದಾದರೊಂದು ‘ಇಂಟೆಗ್ರೇಟೆಡ್ ಸರ್ಕಿಟ್’ (ಐಸಿ) ಮತ್ತು ‘ಪಿಸಿಬಿ’ ತಯಾರಿಸಲು ಇವೆರಡರ ಅವಶ್ಯಕತೆಯಿರುತ್ತದೆ. ಅದಕ್ಕಾಗಿ ‘ಕಂಡಕ್ಟರ್’ ಮತ್ತು ‘ರೆಸಿಸ್ಟರ್’ ಉಪಯೋಗಿಸಿದರೆ ಸರ್ಕಿಟ್ ತುಂಬಾ ಸಮಸ್ಯೆಯುಂಟು ಮಾಡುವ, ದೊಡ್ಡದಾಗಿ ಹಾಗೂ ಭಾರವುಳ್ಳದ್ದಾಗುತ್ತದೆ. ಆದ್ದರಿಂದ ‘ಸೆಮಿಕಂಡಕ್ಟರ್’ಗಳನ್ನು ಉಪಯೋಗಿಸಲಾಗುತ್ತದೆ. ‘ಸೆಮಿಕಂಡಕ್ಟರ್’ ಇವೆರಡರ ಕಾರ್ಯವನ್ನು ಮಾಡುತ್ತದೆ. ‘ಸೆಮಿಕಂಡಕ್ಟರ್’ನಲ್ಲಿ ಲಕ್ಷಾವಧಿ ‘ಟ್ರಾನ್ಸಿಸ್ಟರ್’ ಇರುತ್ತವೆ. ಅವು ಯಾವುದೇ ತಾರ್ಕಿಕ (ಲಾಜಿಕಲ್) ಪ್ರಕ್ರಿಯೆಯನ್ನು ನಡೆಸಲು ಸಕ್ಷಮವಾಗಿರುತ್ತವೆ. ‘ಸೆಮಿಕಂಡಕ್ಟರ್’ ಇದು ಆಧುನಿಕ ಇಲೆಕ್ಟ್ರಾನಿಕ್ಸ್‌ನ ಅಡಿಪಾಯವಾಗಿದೆ.
೨. ‘ಸೆಮಿಕಂಡಕ್ಟರ್’ನ ವ್ಯಾಪ್ತಿ
ಸದ್ಯ ‘ಸೆಮಿಕಂಡಕ್ಟರ್’ನ ಉಪಯೋಗವಾಗದಿರುವ ಒಂದೇ ಒಂದು ಇಲೆಕ್ಟ್ರಾನಿಕ್ ಉಪಕರಣ ಇಲ್ಲ. ನಮ್ಮ ದೂರದರ್ಶನ ಉಪಕರಣ (ಟಿ.ವಿ), ಫ್ರಿಡ್ಜ್, ಕೆಮೆರಾ, ಏರ್‌ಕಂಡೀಶನರ್, ವಾಹನ, ಗಡಿಯಾರಗಳು, ‘ಚಿಪ್’, ‘ಎಟಿಎಮ್ ಕಾರ್ಡ್’, ಪ್ರವೇಶದ್ವಾರದ ಗಂಟೆ ಇತ್ಯಾದಿ ಪ್ರತಿಯೊಂದು ಇಲೆಕ್ಟ್ರಾನಿಕ್ ಉಪಕರಣದಲ್ಲಿ ‘ಸೆಮಿಕಂಡಕ್ಟರ್’ ಉಪಯೋಗವಾಗುತ್ತದೆ ಹಾಗೂ ಇನ್ನು ಮುಂದೆ ಅದು ಹೆಚ್ಚಾಗುತ್ತಾ ಹೋಗಲಿದೆ. ಕೃತಕ ಬುದ್ಧಿಮತ್ತೆಗಾಗಿ (‘ಎ ಐ ’ಗಾಗಿ) ಸೆಮಿಕಂಡಕ್ಟರ್ ಎಲ್ಲಕ್ಕಿಂತ ಮೂಲಭೂತ ಆವಶ್ಯಕವಾಗಿದೆ.
೩. ‘ಸೆಮಿಕಂಡಕ್ಟರ್’ನ ಲಾಭ
ಭಾರತದಲ್ಲಿ ಗುಜರಾತದಲ್ಲಿ ‘ಸೆಮಿಕಂಡಕ್ಟರ್’ನ ೨ ಮತ್ತು ಆಸಾಮ್‌ನಲ್ಲಿ ೧ ಹೀಗೆ ೩ ಯೋಜನೆಗಳು ನಡೆಯುತ್ತಿವೆ. ಈಗ ಜಗತ್ತಿನಾದ್ಯಂತ ಪ್ರತಿ ವರ್ಷ ೧ ಟ್ರಿಲಿಯನ್ (೧ ಲಕ್ಷ ಕೋಟಿ) ‘ಸೆಮಿಕಂಡಕ್ಟರ್’ ತಯಾರಾಗುತ್ತವೆ. ತೈವಾನ್‌ನ ‘ಟಿ.ಎಸ್.ಎಮ್.ಸಿ.’ ಈ ಕಂಪನಿ ಜಗತ್ತಿನ ಅತೀ ಹೆಚ್ಚು ‘ಸೆಮಿಕಂಡಕ್ಟರ್’ಗಳನ್ನು ಅಂದರೆ ಜಾಗತಿಕ ಉತ್ಪಾದನೆಯ ಶೇ. ೫೦ ರಷ್ಟು ಉತ್ಪಾದಿಸುತ್ತದೆ. ‘ವೇದಾಂತ’ ಕಂಪನಿಯ ಅಧ್ಯಕ್ಷರು ಹೇಳಿರುವುದೇನೆಂದರೆ, ಗುಜರಾತದಲ್ಲಿನ ಕಾರ್ಖಾನೆ ಆರಂಭವಾದ ನಂತರ ೧ ಲಕ್ಷ ರೂಪಾಯಿಯಲ್ಲಿ ಸಿಗುವ ಸಂಚಾರಿ ಗಣಕಯಂತ್ರ (ಲ್ಯಾಪಟಾಪ್) ೪೦ ಸಾವಿರ ರೂಪಾಯಿಯಲ್ಲಿ ಸಿಗಲಿಕ್ಕಿದೆ. ಅಂದರೆ ‘ಸೆಮಿಕಂಡಕ್ಟರ್’ ಉಪಯೋಗಿಸುವುದರಿಂದ ಎಲ್ಲ ಪ್ರಕಾರದ ಇಲೆಕ್ಟ್ರಾನಿಕ್ಸ್ ವಸ್ತುಗಳು ಇಷ್ಟು ಅಗ್ಗವಾಗಲಿಕ್ಕಿವೆ.
೪. ‘ಸೆಮಿಕಂಡಕ್ಟರ್’ನ ಬಗ್ಗೆ ಭಾರತದ ಸದ್ಯದ ಸ್ಥಿತಿ
‘ಸೆಮಿಕಂಡಕ್ಟರ್’ನ ವಿಷಯದಲ್ಲಿ ಭಾರತದ ವಿಚಾರ ಮಾಡಿದರೆ, ನಾವು ಶೇ. ೧೦೦ ರಷ್ಟು ‘ಸೆಮಿಕಂಡಕ್ಟರ್’ಗಳನ್ನು ವಿದೇಶಗಳಿಂದ ಆಮದು ಮಾಡುತ್ತೇವೆ. ಅದರಲ್ಲಿ ಪ್ರಾಮುಖ್ಯವಾಗಿ ಚೀನಾ, ಜಪಾನ್, ತೈವಾನ್ ಮತ್ತು ಅಮೇರಿಕಾದಂತಹ ದೇಶಗಳಿವೆ. ಅದಕ್ಕಾಗಿ ನಾವು ೨ ಬಿಲಿಯನ್ ಡಾಲರ್ಸ್‌ಗಳಿಗಿಂತಲೂ (೧೬ ಸಾವಿರದ ೬೭೬ ಕೋಟಿ ರೂಪಾಯಿಗಳಿಗಿಂತಲೂ) ಹೆಚ್ಚು ಖರ್ಚು ಮಾಡುತ್ತೇವೆ. ಜಗತ್ತಿನ ‘ಸೆಮಿಕಂಡಕ್ಟರ್’ನ ಕಾರ್ಖಾನೆಗಳ ಪೈಕಿ ಕೇವಲ ಶೇ. ೨ ರಷ್ಟೇ ಕಾರ್ಖಾನೆಗಳು ಭಾರತದಲ್ಲಿವೆ, ತದ್ವಿರುದ್ಧ ಭಾರತದ ಇಲೆಕ್ಟ್ರಾನಿಕ್ಸ್ ವ್ಯಾಪಾರ ಕೆಲವು ಅಬ್ಜ ರೂಪಾಯಿಗಳಷ್ಟಿದೆ. ಸದ್ಯ ಭಾರತದಲ್ಲಿರುವ ಕಾರ್ಖಾನೆಗಳು ಕೂಡ ಅಷ್ಟು ಕ್ಷಮತೆಯ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಭಾರತದ ಮೊಹಾಲಿ (ಪಂಜಾಬ್) ಯಲ್ಲಿನ ಕಾರ್ಖಾನೆಯಲ್ಲಿ ‘ಶಕ್ತಿ ಪ್ರೊಸೆಸರ್ಸ್’ ಉತ್ಪಾದನೆಯಾಗುತ್ತದೆ. ಇಲ್ಲಿ ೧೮೦ ‘ನ್ಯಾನೋಮೀಟರ್’ನಷ್ಟು ಉದ್ದದ ಚಿಪ್ ಸಿದ್ಧಪಡಿಸಲಾಗುತ್ತದೆ, ಆದರೆ ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಉಪಯೋಗಿಸುವ ಚಿಪ್‌ನ ಆಕಾರ ೫ ರಿಂದ ೨೨ ‘ನ್ಯಾನೋಮೀಟರ್’ನಷ್ಟು ಸಣ್ಣದಾಗಿರುತ್ತದೆ. ಆದ್ದರಿಂದ ಭಾರತದಲ್ಲಿನ ತಂತ್ರಜ್ಞಾನ ಅಪೂರ್ಣವಾಗಿದೆ ಅಥವಾ ಕಾಲಬಾಹ್ಯವಾದಂತಾಗಿದೆ.
೫. ದೇಶಿ ಮತ್ತು ವಿದೇಶಿ ಕಂಪನಿಗಳ ನಿಲುವು
ಭಾರತದ ದೊಡ್ಡ ಕಂಪನಿಗಳು ಪ್ರಾರಂಭದಲ್ಲಿ ಈ ಕ್ಷೇತ್ರದಲ್ಲಿ ಹಣ ಹೂಡುತ್ತಿರಲಿಲ್ಲ; ಏಕೆಂದರೆ ಅದರಿಂದ ತಕ್ಷಣ ಫಲ ಸಿಗುವುದಿಲ್ಲ ಅಥವಾ ಲಾಭವಾಗುವುದಿಲ್ಲ. ಅದಕ್ಕೆ ಹೆಚ್ಚು ಸಮಯ ತಗಲುತ್ತದೆ. ಭಾರತದ ದೊಡ್ಡ ಕಂಪನಿಗಳು ಈ ಕ್ಷೇತ್ರದಲ್ಲಿ ಹಣ ಹೂಡುವ ಬದಲು ತಮಗೆ ಅವಶ್ಯಕವಿರುವ ‘ಸೆಮಿಕಂಡಕ್ಟರ್’ಗಳನ್ನು ವಿದೇಶಗಳಿಂದ ತರಿಸುತ್ತವೆ. ಅಂದರೆ ಆಮದು ಮಾಡುತ್ತವೆ. ಭಾರತದ ಹೊರಗಿನ ಇಲೆಕ್ಟ್ರಾನಿಕ್ ವಸ್ತುಗಳನ್ನು ಭಾರತಕ್ಕೆ ಆಮದು ಮಾಡುವಾಗ ಹೆಚ್ಚು ತೆರಿಗೆ ತುಂಬಿಸಬೇಕಾಗುತ್ತದೆ. ಅದರ ಪರಿಣಾಮದಿಂದ ಇಲೆಕ್ಟ್ರಾನಿಕ್ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತದೆ.
ವಿದೇಶಗಳಲ್ಲಿನ ಈ ಕ್ಷೇತ್ರದ ದೊಡ್ಡ ಕಂಪನಿಗಳು ಭಾರತದಲ್ಲಿ ‘ಸೆಮಿಕಂಡಕ್ಟರ್’ಗಳ ಕಾರ್ಖಾನೆಗಳನ್ನು ಆರಂಭಿಸದಿರುವುದರ ಕಾರಣ ಕೇಳಿದಾಗ ಭಾರತದಲ್ಲಿ ಅದಕ್ಕಾಗಿ ಆವಶ್ಯಕವಿರುವ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ಹಾಗೂ ಭಾರತದಲ್ಲಿ ಈ ಉದ್ಯೋಗವನ್ನು ನಿರ್ಮಿಸಲು ಸರಕಾರದಿಂದ ಆರ್ಥಿಕ ಸಹಾಯ ಸಿಗುವುದಿಲ್ಲ, ಎಂದು ಹೇಳುತ್ತಿದ್ದವು. ಆದ್ದರಿಂದ ಈ ‘ಯೋಜನೆ’ಯನ್ನು ಆರಂಭಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಆದರೆ ಇದು ಕೆಲವು ವರ್ಷಗಳ ಹಿಂದಿನ ಸ್ಥಿತಿಯಾಗಿತ್ತು. ಈಗ ಅದರಲ್ಲಿ ಬಹಳಷ್ಟು ಬದಲಾವಣೆಯಾಗಿದೆ.
೬. ಕೋವಿಡ್ ಸಮಯದಲ್ಲಿ ಬೇಡಿಕೆಯಲ್ಲಿ ಹೆಚ್ಚಳ
ಕೋವಿಡ್ ಮಹಾಮಾರಿಯ ಸಮಯದಲ್ಲಿ ಇಲೆಕ್ಟ್ರಾನಿಕ್ಸ್ ಉಪಕರಣಗಳ ಬೇಡಿಕೆ ಕುಸಿಯಿತು. ಅದರ ಪರಿಣಾಮದಿಂದ ‘ಸೆಮಿಕಂಡಕ್ಟರ್’ ತಯಾರಿಸುವ ಕಂಪನಿಗಳು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಿದವು. ಆ ಸಮಯದ ನಂತರ ಅಂದರೆ ಸಂಚಾರನಿಷೇಧ ತೆರವುಗೊಳಿಸಿದ ನಂತರ ತಕ್ಷಣ ಇಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಯಿತು; ಆದರೆ ‘ಸೆಮಿಕಂಡಕ್ಟರ್ಸ್’ಗಳ ಉತ್ಪಾದನೆ ಕಡಿಮೆ ಮಾಡಿದುದರಿಂದ ಅವು ದೊರೆಯುತ್ತಿರಲಿಲ್ಲ. ಆದ್ದರಿಂದ ಜಾಗತಿಕ ಸ್ತರದಲ್ಲಿ ಚಿಪ್ಸ್ ಗಳ ಕೊರತೆಯುಂಟಾಗಿ ೧೬೯ ದೇಶಗಳಲ್ಲಿ ಪರಿಣಾಮವಾಯಿತು. ಆಗ ಬೇಡಿಕೆ ಎಷ್ಟು ಹೆಚ್ಚಾಗಿತ್ತೆಂದರೆ, ಜಗತ್ತಿನಲ್ಲಿ ಬೆರಳೆಣಿಕೆಯಷ್ಟಿರುವ ‘ಸೆಮಿಕಂಡಕ್ಟರ್ಸ್’ಗಳನ್ನು ಉತ್ಪಾದಿಸುವ ಎಲ್ಲ ಕಂಪನಿಗಳು ಒಟ್ಟಾಗಿ ಉತ್ಪಾದಿಸಿದರೂ ಬೇಡಿಕೆಯನ್ನು ಪೂರೈಸಲು ಸಾಧ್ಯವಿರಲಿಲ್ಲ. ಇದನ್ನು ಗಮನಿಸಿ ಚಿಪ್ ಉತ್ಪಾದನೆ ಮಾಡುವ ಅಮೇರಿಕಾ, ಜಪಾನ್, ತೈವಾನ್, ದಕ್ಷಿಣ ಕೊರಿಯಾ, ಯುರೋಪ್, ಚೀನಾ ಇವರೆಲ್ಲರೂ ‘ಸೆಮಿಕಂಡಕ್ಟರ್ಸ್’ಗಳ ಉತ್ಪಾದನೆಯ ಮೇಲೆ ಹೆಚ್ಚು ಗಮನಹರಿಸಿ ಆರ್ಥಿಕ ಸೌಲಭ್ಯಗಳ ವ್ಯವಸ್ಥೆ ಮಾಡಿದವು.
೭. ‘ಸೆಮಿಕಂಡಕ್ಟರ್’ ತಯಾರಿಸುವ ಪ್ರಕ್ರಿಯೆ
‘ಸೆಮಿಕಂಡಕ್ಟರ್’ ತಯಾರಿಸುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರ ವಾಗಿದೆ. ಮೊದಲು ಗಣಕಯಂತ್ರ ಪದ್ಧತಿಯಿಂದ ಚಿಪ್‌ನ ಡಿಝೈನ್ ಮಾಡಬೇಕಾಗುತ್ತದೆ. ಸದ್ಯ ಇಸ್ರೈಲ್ ಜಗತ್ತಿನಲ್ಲಿ ಚಿಪ್‌ನ ಡಿಝೈನ್‌ನಲ್ಲಿ ಮುಂಚೂಣಿಯಲ್ಲಿದೆ. ‘ಚಿಪ್ ಡಿಝೈನ್’ ಆದ ನಂತರ ಮುಂದಿನ ಹಂತವೇ ಪ್ರತ್ಯಕ್ಷ ಉತ್ಪಾದನೆ. ಇದು ಕಠಿಣ ಪ್ರಕ್ರಿಯೆ ಆಗಿದೆ. ಈ ಪ್ರಕ್ರಿಯೆಯ ಉದ್ಯೋಗ ತೈವಾನ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿದೆ. ಅಂದರೆ ಜಾಗತಿಕ ಉತ್ಪಾದನೆಯಲ್ಲಿ ಶೇ. ೬೩ ರಷ್ಟು ತೈವಾನನÀಲ್ಲಿ, ಶೇ. ೧೩ ರಷ್ಟು ಅಮೇರಿಕಾದಲ್ಲಿ ಆಗುತ್ತದೆ. ಯಾವುದೇ ಮದರ್ ಬೋರ್ಡ್ (ಗಣಕಯಂತ್ರದಲ್ಲಿನ ಮುಖ್ಯ ಸರ್ಕಿಟ್ ಬೋರ್ಡ್, ಅದರಲ್ಲಿ ಎಲ್ಲ ಇಲೆಕ್ಟ್ರಾನಿಕ್ ಘಟಕಗಳನ್ನು ಮತ್ತು ಬಾಹ್ಯ ಉಪಕರಣಗಳನ್ನು ಜೋಡಿಸಲಾಗುತ್ತದೆ.) ತೆಗೆದು ಕೊಂಡರೆ ಅದರ ಮೇಲೆ ‘ಮೇಡ್ ಇನ್ ತೈವಾನ್’ (ತೈವಾನ್‌ನಲ್ಲಿ ತಯಾರಿಸಿದ್ದು) ಎಂದು ಬರೆದಿರುತ್ತದೆ.
‘ಆಸೂಸ್’, ಗಿಗಾಬಾಯಿಟ್’ ಇತ್ಯಾದಿ ತೈವಾನ್‌ನ ಕಂಪನಿಗಳಿವೆ. ಕೊನೆಯ ಹಂತವೆಂದರೆ ಅದರ ಎಸೆಂಬ್ಲಿ (ಜೋಡಣೆ) ! ಅದರಲ್ಲಿ ಎಲ್ಲ ಭಾಗಗಳನ್ನು ಜೋಡಿಸಿ ಒಂದು ಇಂಟೆಗ್ರೇಟೆಡ್ ಸರ್ಕಿಟ್’ ಅಂದರೆ ‘ಐಸಿ’ ಸಿದ್ಧಗೊಳಿಸಲಾಗುತ್ತದೆ. ಯಾವುದೇ ದೇಶ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಷ್ಟು ಸಕ್ಷಮವಿಲ್ಲ. ಇದರ ಕಾರಣವೆಂದರೆ, ಈ ಕಾರ್ಖಾನೆಗಳಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಅಖಂಡವಾಗಿ ಇರಬೇಕಾಗುತ್ತದೆ. ಕಾರ್ಖಾನೆಯನ್ನು ಸ್ಥಾಪಿಸಲು ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ, ಅಂದರೆ ‘ಸೆಮಿಕಂಡಕ್ಟರ್’ ತಯಾರಿಸುವ ಒಂದು ಕಾರ್ಖಾನೆ ಸ್ಥಾಪಿಸಲು ಸುಮಾರು ೨೨ ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಇದರ ಹೊರತು ಜಂತುನಿರ್ಮೂಲನ ಪ್ರಕ್ರಿಯೆ ಒಳ್ಳೆಯ ಮಟ್ಟದ್ದಾಗಿರಬೇಕಾಗುತ್ತದೆ. ಈ ಎಲ್ಲ ವಿಷಯಗಳನ್ನು ಒಂದೇ ದೇಶದಲ್ಲಿ ಉಪಲಬ್ಧಗೊಳಿಸುವುದು ಕಠಿಣಪ್ರಾಯವಾಗಿರುತ್ತದೆ.
೮. ಭಾರತದ ಕ್ಷಮತೆ
ಭಾರತದಲ್ಲಿ ಚಿಪ್ ಡಿಝೈನ್ ಮಾಡುವ ಕ್ಷಮತೆ ಚೆನ್ನಾಗಿದೆ. ಜಗತ್ತಿನ ಈ ಕ್ಷೇತ್ರದಲ್ಲಿನ ಡಿಝೈನ್‌ಗಳ ಪೈಕಿ ಶೇ. ೨೦ ರಷ್ಟು ಡಿಝೈನ್ ಭಾರತೀಯ ಅಭಿಯಂತರು (ತಂತ್ರಜ್ಞಾನಿಗಳು) ಮಾಡುತ್ತಾರೆ, ಅಂದರೆ ‘ಸೆಮಿಕಂಡಕ್ಟರ್’ ನಿರ್ಮಾಣದ ಒಂದು ಹಂತವನ್ನು ನಾವು (ಭಾರತೀಯರು) ಚೆನ್ನಾಗಿ ಮಾಡಬಲ್ಲೆವು. ಇದಕ್ಕೆ ಪ್ರತ್ಯಕ್ಷ ಉತ್ಪಾದನೆ ಹಾಗೂ ಜೋಡಣೆಯನ್ನು ಅಳವಡಿಸಿದರೆ ಭಾರತ ಈ ಸ್ಪರ್ಧೆಯಲ್ಲಿ ಆತ್ಮವಿಶ್ವಾಸದಿಂದ ಇಳಿಯಬಹುದು. ಭಾರತದಲ್ಲಿ ಆರಂಭಿಸಿರುವ ೩ ಯೋಜನೆಗಳಿಂದಾಗಿ ಜಗತ್ತಿನ ಒಟ್ಟು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಶೇ. ೨೦ ರಷ್ಟು ಉತ್ಪಾದನೆ ನಮ್ಮ ದೇಶದಲ್ಲಿಯೇ ಆಗಲಿಕ್ಕಿದೆ. ಒಟ್ಟು ೧ ಲಕ್ಷದ ೨೫ ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯಿಂದ ೩ ಯೋಜನೆಗಳು ನಿರ್ಮಾಣವಾಗುತ್ತಿವೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಗಟ್ಟಲೆ ಉದ್ಯೋಗಗಳು ಉಪಲಬ್ಧವಾಗಲಿಕ್ಕಿದೆ. ಸುಮಾರು ೩ ಲಕ್ಷಕ್ಕಿಂತ ಹೆಚ್ಚು ನೌಕರಿಯ ಅವಕಾಶ ಸಿಗಲಿಕ್ಕಿದೆ. ‘ಸೆಮಿಕಂಡಕ್ಟರ್ ಔಟ್‌ಲುಕ್ ೨೦೨೩’ ರ ವರದಿಗನುಸಾರ ‘ಭಾರತವು ಈ ಅಭಿಯಾಂತ್ರಿಕ ಕೌಶಲ್ಯ ವಿಕಾಸದಲ್ಲಿ ಶಕ್ತಿಯ ಮೂಲವೆಂದು ಉದಯವಾಗಲಿಕ್ಕಿದೆ. ಭಾರತ ಕೇವಲ ದೇಶಾಂತರ್ಗತ ಅವಶ್ಯಕತೆಗಾಗಿ ಮಾತ್ರವಲ್ಲ, ಅದರ ರಫ್ತ್ತಿಗಾಗಿ ಕೂಡ ‘ಸೆಮಿಕಂಡಕ್ಟರ್’ನ ಉತ್ಪಾದನೆ ಮಾಡಲು ಸಾಧ್ಯವಿದೆ. ‘ಸೆಮಿಕಂಡಕ್ಟರ್’ ಸಹಿತ ಸಂಚಾರಿ ಸಂಗಣಕಗಳಿಗೆ ಬೇಕಾಗುವ ‘ಡಿಸ್ಪ್ಲೇ’ಗಳ (ದೃಶ್ಯಪಟಲ) ಉತ್ಪಾದನೆಯು ಭಾರತದಲ್ಲಿ ಆರಂಭವಾಗಲಿಕ್ಕಿದೆ.
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೩೦.೩.೨೦೨೪)
ತೈವಾನ್‌ನಿಂದ ಭಾರತಕ್ಕೆ ಮಿತ್ರತ್ವದ ನಿಲುವಿನಿಂದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಾಯ !ಭಾರತದಲ್ಲಿ ೧೯೬೦ ರಿಂದ ೭೦ ರ ದಶಕದಲ್ಲಿ ಹಾಗೂ ಅನಂತರ ಇಂದಿನ ವರೆಗೆ ಸೆಮಿಕಂಡಕ್ಟರ್‌ನ ಉತ್ಪಾದನೆಯ ಪ್ರಯತ್ನ ಆರಂಭವಾಗಿತ್ತು; ಆದರೆ ಕೆಲವು ತಾತ್ಕಾಲಿಕ ಅಡಚಣೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ಎಲ್ಲ ಅಡಚಣೆಗಳನ್ನು ಹಿಂದಿಕ್ಕಿ ಯೋಜನೆಯ ಕಾರ್ಯ ಆರಂಭವಾಗಿರುವುದು ಒಳ್ಳೆಯ ಲಕ್ಷಣವಾಗಿದೆ. ಸದ್ಯ ಸೆಮಿಕಂಡಕ್ಟರ್‌ನ ಉತ್ಪಾದನೆ ಮಾಡುವ ಎಲ್ಲ ದೇಶಗಳು ಈ ಕ್ಷೇತ್ರದಲ್ಲಿ ತಮ್ಮ ‘ಮೊನೋಪೊಲಿ’ (ಸರ್ವಾಧಿಕಾರಶಾಹಿ) ಅಥವಾ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಇರಬೇಕು, ಎಂಬುದಕ್ಕಾಗಿ ಪ್ರಯತ್ನಿಸುತ್ತಿವೆ. ಆದ್ದರಿಂದ ಆ ದೇಶಗಳು ತಮ್ಮ ಉತ್ಪಾದನಾ ಕ್ಷಮತೆಯನ್ನು ಹೆಚ್ಚಿಸುತ್ತಿವೆ. ಭಾರತಕ್ಕೆ ಈ ಕಾರ್ಯದಲ್ಲಿ ತೈವಾನದ ಸಹಾಯ ಸಿಗುತ್ತಿದೆ. ತೈವಾನ್ ಸದ್ಯ ಸೆಮಿಕಂಡಕ್ಟರ್ ಉತ್ಪಾದನೆ ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಹಾಗೂ ಅವರಲ್ಲಿ ಆ ತಂತ್ರಜ್ಞಾನ ಇರುವುದರಿಂದ ಭಾರತಕ್ಕೆ ಈ ಕ್ಷೇತ್ರದಲ್ಲಿ ಸಹಾಯ ಮಾಡಿ ಸ್ವಾವಲಂಬಿಯಾಗುವಲ್ಲಿ ಯೋಗದಾನ ನೀಡುತ್ತಿದೆ. ಏಶಿಯಾದ ವಿಚಾರ ಮಾಡುವಾಗ ಇಲ್ಲಿ ಶತ್ರುರಾಷ್ಟ್ರ ಚೀನಾ ಜಾಗತಿಕ ಶಕ್ತಿಶಾಲಿಯಾಗಲು ಪ್ರತಿಯೊಂದು ಕ್ಷೇತ್ರದಲ್ಲಿ ತಾನು ಗುತ್ತಿಗೆದಾರನಾಗಿರಲು ಪ್ರಯತ್ನಿಸುತ್ತಿದೆ. ಚೀನಾವು ತೈವಾನ್ ಮತ್ತು ಭಾರತ ಈ ಎರಡೂ ದೇಶಗಳಿಗೂ ಶತ್ರುರಾಷ್ಟ್ರವಾಗಿದೆ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನವಿರುವ ತೈವಾನ್ ಮಿತ್ರತ್ವದ ನಿಲುವಿನಿಂದ ಭಾರತಕ್ಕೆ ಈ ಕ್ಷೇತ್ರದಲ್ಲಿ ಸಹಾಯ ಮಾಡುತ್ತಿದೆ. – ಶ್ರೀ. ಯಜ್ಞೇಶ ಸಾವಂತ |