ಕೋಲಂಬೋ (ಶ್ರೀಲಂಕಾ) – ಶ್ರೀಲಂಕಾದಲ್ಲಿ ಚೀನಾದ ಬ್ಯಾಂಕಿನಿಂದ ಪಡೆದಿರುವ ಸಾಲದಿಂದ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ಮುಂದಿನ ೩೦ ವರ್ಷಕ್ಕಾಗಿ ಭಾರತ ಮತ್ತು ರಷ್ಯಾ ದೇಶದಲ್ಲಿನ ಕಂಪನಿಗಳಿಗೆ ಒಪ್ಪಿಸಲಾಗಿದೆ.
೧. ಶ್ರೀಲಂಕಾದ ಮಂತ್ರಿ ಮಂಡಳಿಯು ಪ್ರಸಾರ ಮಾಡಿರುವ ಸುತ್ತೋಲೆಯಲ್ಲಿ, ಚೀನಾ ಕಟ್ಟಿರುವ ಮತ್ತಲ ರಾಜಪಕ್ಷೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂ ಆರ್ ಐ ಎ) ನಿರ್ವಹಣೆಯನ್ನು ಭಾರತಕ್ಕೆ ನೀಡಲು ಸರಕಾರವು ಮಾನ್ಯತೆ ನೀಡಿದೆ. ಮುಂದಿನ ೩೦ ವರ್ಷಗಳಿಗಾಗಿ ಈ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತದಲ್ಲಿನ ಶೌರ್ಯ ಇರೋನಾಟಿಕ್ಸ್ (ಪ್ರಾ.) ಲಿಮಿಟೆಡ್ ಮತ್ತು ರಷ್ಯಾದಲ್ಲಿನ ಏರ್ಪೋರ್ಟ್ ಆಫ್ ರೀಜನ್ಸ್ ಮ್ಯಾನೇಜ್ಮೆಂಟ್ ಗೆ ಒಪ್ಪಿಸಲಾಗಿದೆ. ಇದರ ಮೂಲಕ ಸರಕಾರಿ ಚಟುವಟಿಕೆಗಳಿಂದ ಆಗುವ ನಷ್ಟ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
೨. ಚೀನಾದ ಎಕ್ಸಿಮ್ ಬ್ಯಾಂಕ್ ಮತ್ತಲ ರಾಜಪಕ್ಷೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಗಾಗಿ ಸಾಲ ನೀಡಿತ್ತು. ಈ ವಿಮಾನ ನಿಲ್ದಾಣದ ಉದ್ಘಾಟನೆ ೨೦೧೩ ರಲ್ಲಿ ನಡೆದಿದ್ದು; ಆದರೆ ಈ ವಿಮಾನ ನಿಲ್ದಾಣದಲ್ಲಿ ಬಹಳ ಕಡಿಮೆ ವ್ಯಾಪಾರ ನಡೆಯುತ್ತಿರುವುದರಿಂದ ಈ ವಿಮಾನ ನಿಲ್ದಾಣದ ಕಾಮಗಾರಿ ವಿವಾದಕ್ಕೆ ಸಿಲುಕಿದೆ. ಇಲ್ಲಿ ಪ್ರಯಾಣಿಕರು ಕಡಿಮೆ ಇರುವುದರಿಂದ ವಿಮಾನಗಳ ಸಂಖ್ಯೆ ಸತತವಾಗಿ ಕಡಿಮೆ ಆಗುತ್ತಿವೆ. ಈ ವಿಮಾನನಿಲ್ದಾಣವು ಪರಿಸರದ ದೃಷ್ಟಿಯಿಂದಲೂ ಕೂಡ ಬಹಳ ಸೂಕ್ಷ್ಮವಾಗಿರುವುದಾಗಿ ಸಾಬೀತಾಗಿದೆ. ರಾಷ್ಟ್ರಪತಿ ರಾಜಪಕ್ಷೆ ಅವರ ಕುಟುಂಬದವರು ವಿನಾಕಾರಣ ಈ ವಿಮಾನ ನಿಲ್ದಾಣ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕ ತಜ್ಞರ ಪ್ರಕಾರ, ಈ ವಿಮಾನ ನಿಲ್ದಾಣ ಕಟ್ಟಿ ಚೀನಾ ಶ್ರೀಲಂಕಾವನ್ನು ಇನ್ನೊಂದು ಸಾಲದ ಸುಳಿಗೆ ಸಿಲುಕಿಸಿದೆ. ವಿಚಿತ್ರವೆಂದರೆ ರಾಜಪಕ್ಷೆ ಕುಟುಂಬದವರು ಈ ವಿಮಾನ ನಿಲ್ದಾಣವನ್ನು ಅವರ ಗ್ರಾಮದಲ್ಲಿ ಕಟ್ಟಿದ್ದಾರೆ. ಅಲ್ಲಿ ಅದರ ಅವಶ್ಯಕತೆ ಇರಲಿಲ್ಲ ಎಂದು ತಜ್ಞರು ಟೀಕಿಸಿದ್ದಾರೆ.