ಉತ್ತರಾಖಂಡ: ಇನ್ನೂ ನಿಲ್ಲದ ಕಾಡಿನ ಬೆಂಕಿ!

ವಾಯುದಳದ ಹೆಲಿಕಾಪ್ಟರಿನ ಮೂಲಕ ಬೆಂಕಿ ಆರಿಸುವ ಪ್ರಯತ್ನ

ಡೆಹರಾಡೂನ್ (ಉತ್ತರಾಖಂಡ )- ಉತ್ತರಾಖಂಡದ ನೈನಿತಾಲದಲ್ಲಿನ ಕಾಡಿನಲ್ಲಿ ಅಂಟಿರುವ ಬೆಂಕಿಯು ೪ ದಿನಗಳು ಕಳೆದರೂ ನಿಯಂತ್ರಣಕ್ಕೆ ಬಂದಿಲ್ಲ. ಈ ಬೆಂಕಿ ಉಲ್ಬಣಿಸುತ್ತಿದ್ದು ಅದನ್ನು ಹಿಡಿತಕ್ಕೆ ತರುವುದಕ್ಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕದಳ, ಪೋಲಿಸ್ ಮತ್ತು ಸೈನಿಕರು ಕೂಡ ಪ್ರಯತ್ನ ನಡೆಸುತ್ತಿದ್ದಾರೆ. ವಾಯುದಳದ ‘ ಎಂ.ಐ.- 17 ‘ಹೆಲಿಕಾಪ್ಟರ್ ಬಳಸಿ ನೀರು ಸುರಿಯಲಾಗುತ್ತಿದೆ. ಈ ಹಿಂದೆ ಕೂಡ ೨೦೧೯ ಮತ್ತು ೨೦೨೧ ರಲ್ಲಿ ಬೆಂಕಿ ಹತ್ತಿದಾಗ ‘ಎಂ.ಐ. – 17’ ಹೆಲಿಕಾಪ್ಟರ್ ಬಳಸಿ ಬೆಂಕಿಯ ಮೇಲೆ ಹಿಡಿತ ಸಾಧಿಸಲಾಗಿತ್ತು. ಬೆಂಕಿಯ ಹೊಗೆಯಿಂದ ಸುತ್ತಮುತ್ತಲಿನ ಜನರಿಗೆ ಉಸಿರಾಡಲು ತೊಂದರೆ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಹಧಾಮಿ ಅವರು ಕಾಡಿನಲ್ಲಿ ಹೊತ್ತಿರುವ ಬೆಂಕಿಯ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

೧. ಗಢವಾಲ ವಿಭಾಗದಲ್ಲಿನ ಚಮೊಲಿ, ರುದ್ರ ಪ್ರಯಾಗ್, ಉತ್ತರ ಕಾಶಿ, ಪೌರಿ ಮತ್ತು ಟಹೇರಿ, ಡೆಹರಾಡೋನಿನ ಕಾಡಿನಲ್ಲಿ ಬೆಂಕಿ ನಿರಂತರವಾಗಿ ಮಿತಿಮೀರಿ ಉರಿಯುತ್ತಿದೆ. ಈ ಪ್ರದೇಶದಲ್ಲಿ ಬಹಳಷ್ಟು ಪೈನ್ ಮರಗಳು ಇರುವುದರಿಂದ ಉಷ್ಣತೆಯಿಂದ ಬೆಂಕಿ ವೇಗವಾಗಿ ಪಸರಿಸುತ್ತಿದೆ. ಅನೇಕ ಸ್ಥಳಗಳಲ್ಲಿ ಬೆಂಕಿ ನಂದಿಸಲು ನೀರು ಸಿಗುತ್ತಿಲ್ಲ.

೨. ಕುಮಾವು ಪ್ರದೇಶದಲ್ಲಿನ ನೈನಿತಾಲ್, ಬಾಗೇಶ್ವರ, ಆಲ್ಮೋಡ ಮತ್ತು ಪಿತೌರಾಗಢ ಈ ಪ್ರದೇಶದ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ಗ್ರಾಮೀಣ ಪ್ರದೇಶದೆಡೆ ಪಲಾಯನಗೊಳ್ಳುತ್ತಿವೆ.

೩. ಈ ವರ್ಷ ಸಂಪೂರ್ಣ ಉತ್ತರಖಂಡದಲ್ಲಿನ ಕಾಡಿನಲ್ಲಿ ಬೆಂಕಿಯ ೫೭೫ ಘಟನೆಗಳು ದಾಖಲಾಗಿವೆ. ಇದರಲ್ಲಿ ಸುಮಾರು ೬೯೦ ಹೆಕ್ಟರ್ ಕಾಡು ಹೊತ್ತಿ ಉರಿದು ಬೂದಿಯಾಗಿದೆ. ಒಟ್ಟಾರೆ ಸುಮಾರು ೧೪ ಕೋಟಿ ೪೧ ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಹಚ್ಚಿರುವ ೩ ಜನರ ಬಂಧನ !

ರುದ್ರ ಪ್ರಯಾಗದ ಕಾಡಿನಲ್ಲಿ ಬೆಂಕಿ ಹಚ್ಚುತ್ತಿರುವಾಗ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ನರೇಶ್ ಭಟ್ಟ, ಹೇಮಂತ ಸಿಂಹ ಮತ್ತು ಭಗವತಿ ಲಾಲ್ ಎಂಬವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಬೆಂಕಿ ಅವಘಡದ ಪ್ರಕರಣದಲ್ಲಿ ಒಟ್ಟು ೧೯ ದೂರುಗಳು ದಾಖಲಾಗಿದ್ದು ಅದರಲ್ಲಿ ೧೬ ಪ್ರಕರಣಗಳ ತನಿಖೆ ನಡೆಯುತ್ತಿವೆ.