ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಅರ್ಜಿಯ ಮೇಲಿನ ನಿರ್ಣಯ !
ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು 14 ವರ್ಷದ ಬಲಾತ್ಕಾರ ಸಂತ್ರಸ್ತೆಗೆ ಗರ್ಭಪಾತ ಮಾಡಲು ಅನುಮತಿ ನೀಡಿದೆ. ಈ ಬಾಲಕಿಯು ಗರ್ಭಧರಿಸಿ 30 ವಾರಗಳು ಕಳೆದಿದ್ದು, ನ್ಯಾಯಾಲಯವು ಮುಂಬಯಿಯ ಲೋಕಮಾನ್ಯ ತಿಲಕ ಆಸ್ಪತ್ರೆಯಲ್ಲಿ ತಕ್ಷಣವೇ ಗರ್ಭಪಾತಕ್ಕೆ ವ್ಯವಸ್ಥೆ ಮಾಡುವಂತೆ ಕೋರ್ಟ್ ಆದೇಶಿಸಿದೆ. ನ್ಯಾಯಾಲಯವು ಈ ಪ್ರಕರಣದಲ್ಲಿ ಏಪ್ರಿಲ್ 19 ರಂದು ತಕ್ಷಣ ವಿಚಾರಣೆ ಕೈಗೆತ್ತಿಕೊಂಡಿತ್ತು. ಆಗ ನ್ಯಾಯಾಲಯವು ಬಾಲಕಿಯ ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಆದೇಶಿಸಿತ್ತು. ಅಪ್ರಾಪ್ತ ಬಾಲಕಿಯ ತಾಯಿಯು ಈ ಹಿಂದೆ ಬಾಂಬೆ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಏಪ್ರಿಲ್ 4ರಂದು ನಡೆದ ವಿಚಾರಣೆಯಲ್ಲಿ, ಬಾಂಬೆ ಹೈಕೋರ್ಟ್ ಅಪ್ರಾಪ್ತ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತ್ತು. ನಂತರ ಬಾಲಕಿಯ ತಾಯಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ವೈದ್ಯಕೀಯ ವರದಿಯ ಪ್ರಕಾರ, ಗರ್ಭಪಾತವಾದರೆ ಬಾಲಕಿಯ ಜೀವಕ್ಕೆ ಅಪಾಯವಾಗಬಹುದು. ಆದರೆ ಮಗುವಿನ ಜನನ ಅವಳಿಗೆ ಅಧಿಕ ಅಪಾಯಕಾರಿಯಾಗಿದೆ. ಇದೊಂದು ಕಠಿಣ ಪ್ರಕರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಗರ್ಭಪಾತದ ನಿಯಮಗಳೇನು ? ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂ.ಟಿ.ಪಿ) ಕಾಯಿದೆಯಡಿ, ಯಾವುದೇ ವಿವಾಹಿತ ಮಹಿಳೆ, ಬಲಾತ್ಕಾರ ಸಂತ್ರಸ್ತೆ, ದಿವ್ಯಾಂಗ ಮಹಿಳೆ ಮತ್ತು ಅಪ್ರಾಪ್ತ ಬಾಲಕಿಗೆ 24 ವಾರಗಳವರೆಗೆ ಗರ್ಭಪಾತ ಮಾಡಲು ಅವಕಾಶವಿದೆ. ಗರ್ಭಧಾರಣೆಯು 24 ವಾರಗಳಿಗಿಂತ ಹೆಚ್ಚು ಇದ್ದರೆ, ಗರ್ಭಪಾತಕ್ಕೆ ವೈದ್ಯಕೀಯ ಮಂಡಳಿಯ ಸಲಹೆಯೊಂದಿಗೆ ಪರ್ಭಪಾತಕ್ಕೆ ಅನುಮತಿ ಪಡೆಯಬೇಕಾಗುತ್ತದೆ. ಈ ಕಾನೂನಿನಲ್ಲಿ 2020 ರಲ್ಲಿ ಬದಲಾವಣೆ ಮಾಡಲಾಯಿತು. ಕಳೆದ ವರ್ಷ, ಅಕ್ಟೋಬರ್ 16 ರಂದು, ಸರ್ವೋಚ್ಚ ನ್ಯಾಯಾಲಯವು 26 ವಾರಗಳು ಮತ್ತು 5 ದಿನಗಳ ಗರ್ಭಿಣಿಯಾಗಿದ್ದ ವಿವಾಹಿತ ಮಹಿಳೆಯ ಗರ್ಭಪಾತದ ಅರ್ಜಿಯನ್ನು ತಿರಸ್ಕರಿಸಿತ್ತು. |