Hindus Converting To Buddhism : ಹಿಂದೂಗಳು ಮತಾಂತರಕ್ಕೆ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ!

ಗುಜರಾತ್‌ನಲ್ಲಿ ಭಾಜಪ ಸರ್ಕಾರದ ಸುತ್ತೋಲೆ

ಕರ್ಣಾವತಿ (ಗುಜರಾತ) – ಗುಜರಾತ್‌ನಲ್ಲಿ ದಸರಾ ಮತ್ತು ಇತರ ಪ್ರಮುಖ ಹಬ್ಬಗಳ ದಿನದಂದು ದಲಿತ ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಭಾಜಪ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಹಿಂದೂ ಧರ್ಮದಿಂದ ಬೌದ್ಧ, ಜೈನ, ಸಿಖ್ ಅಥವಾ ಇನ್ನಾವುದೇ ಧರ್ಮಕ್ಕೆ ಮತಾಂತರಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆಯುವುದು ಅಗತ್ಯವೆಂದು ಸೂಚಿಸಲಾಗಿದೆ. ಗುಜರಾತ ಧರ್ಮ ಸ್ವಾತಂತ್ರ್ಯ ಕಾಯಿದೆ 2003’ ರ ನಿಬಂಧನೆಗಳ ಪ್ರಕಾರ ಇದು ಕಡ್ಡಾಯವಾಗಿದೆ’ ಎಂದು ಹೇಳಲಾಗಿದೆ. ಬೌದ್ಧಧರ್ಮ ಸ್ವೀಕರಿಸುವ ಅರ್ಜಿಗಳ ಮೇಲೆ ನಿಯಮಗಳಂತೆ ಕ್ರಮ ನಡೆಯುತ್ತಿಲ್ಲ ಎಂದು ಗಮನಕ್ಕೆ ಬಂದ ಬಳಿಕ ಗುಜರಾತ ಸರಕಾರ ಏಪ್ರಿಲ್ 8 ರಂದು ಈ ಸುತ್ತೋಲೆ ಹೊರಡಿಸಿದೆ. ಬೌದ್ಧ ಧರ್ಮವು ಸ್ವತಂತ್ರ ಧರ್ಮವಾಗಿದ್ದು, ಮತಾಂತರಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಅನುಮತಿ ಆವಶ್ಯಕವಾಗಿರುವ ವಿಷಯವನ್ನು ಇದರಲ್ಲಿ ನಮೂದಿಸಲಾಗಿದೆ.

1. ಈ ಸುತ್ತೋಲೆ ಪ್ರಕಾರ: ‘ಗುಜರಾತ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ಯನ್ನು ಜಿಲ್ಲಾಧಿಕಾರಿಗಳ ಕಚೇರಿಗಳು ಮನಬಂದಂತೆ ಅರ್ಥೈಸಿಕೊಳ್ಳುತ್ತಿವೆ. ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪಿಗೆ ಕೋರುವ ಅರ್ಜಿಯ ಮೇಲೆ ಕಾನೂನುರೀತ್ಯಾ ಕ್ರಮಗಳನ್ನು ಕೈಕೊಳ್ಳದೇ ಇರುವ ಘಟನೆಗಳು ಕಂಡು ಬಂದಿವೆ. ಹಾಗೆಯೇ ಕೆಲವೊಮ್ಮೆ ಅರ್ಜಿದಾರರು ಸ್ವಾಯತ್ತ ಸಂಸ್ಥೆಗಳಿಂದ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಪೂರ್ವಾನುಮತಿ ಆವಶ್ಯಕವಿಲ್ಲವೆನ್ನುವ ಮನವಿಗಳನ್ನು ತರುತ್ತಿರುವುದು ಕಂಡು ಬಂದಿದೆ. ಆದರೆ ಇದು ಅಂತಹ ವಿಷಯವಲ್ಲ. ಬೌದ್ಧ ಧರ್ಮ ವಿಭಿನ್ನ ಧರ್ಮವಾಗಿದೆ. ಈ ಧರ್ಮಕ್ಕೆ ಪರಿವರ್ತನೆಗೊಳ್ಳುವುದಿದ್ದರೆ, ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

2. ಗುಜರಾತಿನ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ‘ಗುಜರಾತ್ ಬೌದ್ಧಿಸ್ಟ ಅಕಾಡೆಮಿ’ ಈ ಸಂಸ್ಥೆಯಿಂದ ಮತಾಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಅಕಾಡಮಿಯ ಸಚಿವರಾದ ರಮೇಶ ಬಣಕಾರ ಅವರು ಈ ಸುತ್ತೋಲೆಯನ್ನು ಸ್ವಾಗತಿಸಿದ್ದಾರೆ. ಅವರು ಮಾತನಾಡಿ, ಕಾನೂನನ್ನು ಇದುವರೆಗೆ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿತ್ತು. ಈಗ ಸರಕಾರದ ಸುತ್ತೋಲೆಯಿಂದ ಬೌದ್ಧ ಧರ್ಮ ಬೇರೆ ಧರ್ಮವಾಗಿದೆ ಮತ್ತು ಅದು ಹಿಂದೂ ಧರ್ಮದೊಂದಿಗೆ ಸಂಬಂಧವಿಲ್ಲವೆನ್ನುವುದು ಸ್ಪಷ್ಟವಾಗಿದೆ. ಆಡಳಿತದಲ್ಲಿರುವ ಕೆಲವರು ಗೊಂದಲದ ವಾತಾವರಣ ಸೃಷ್ಟಿಸಿದ್ದರು. ಅದು ಈ ಸುತ್ತೋಲೆಯಿಂದ ದೂರವಾಗಿದೆ ಎಂದರು.