ಬತ್ತಿಹೋದ ಚೆನ್ನೈನ ಅತಿ ದೊಡ್ಡ ವೀರನಂ ಸರೋವರ!

ಚೆನ್ನೈನಲ್ಲೂ ನೀರಿನ ಕೊರತೆ

ಚೆನ್ನೈ (ತಮಿಳುನಾಡು) – ಕರ್ನಾಟಕದ ರಾಜಧಾನಿ ಬೆಂಗಳೂರಿನ ನಂತರ ಈಗ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಕೂಡ ನೀರಿನ ಕೊರತೆ ಎದುರಾಗಿದೆ. ಚೆನ್ನೈನ 43 ಪ್ರತಿಶತದಷ್ಟು ಜನಸಂಖ್ಯೆಯ ದಾಹವನ್ನು ನೀಗಿಸುವ ಅತಿ ದೊಡ್ಡ ವೀರನಂ ಸರೋವರವು ಬತ್ತಿಹೋಗುತ್ತಿದೆ. ಈ ಕೆರೆಯ ಕೆಲವು ಭಾಗಗಳಲ್ಲಿ ಮಾತ್ರ ನೀರು ಉಳಿದಿದೆ. ಕಳೆದ ವರ್ಷ ಜುಲೈನಲ್ಲಿ ಇದೇ ಪರಿಸ್ಥಿತಿ ಎದುರಾಗಿತ್ತು. ಈ ವರ್ಷ 3 ತಿಂಗಳ ಹಿಂದೆಯೇ ಜಲಾಶಯಗಳು ಬತ್ತಿ ಹೋಗಲಾರಂಭಿಸಿವೆ. ಫೆಬ್ರವರಿ 28 ರಿಂದ ವೀರನಂ ಸರೋವರದಿಂದ ನೀರು ಸರಬರಾಜು ನಿಲ್ಲಿಸಲಾಗಿದೆ. ಇತರ ಜಲಾಶಯಗಳ ಸಾಮರ್ಥ್ಯವೂ ದಯನೀಯವಾಗಿ ಕಡಿಮೆ ಆಗಿದೆ. ಸರ್ಕಾರದ ಕಡೆಯಿಂದ ನೀರನ್ನು ಪೂರೈಸುವುದಕ್ಕಾಗಿ , ಕೆಲವು ಸ್ಥಳಗಳಲ್ಲಿ ದಿನ ಬಿಟ್ಟು ದಿನ ನೀರನ್ನು ಪೂರೈಸಲಾಗುತ್ತಿದೆ.

1. ಭೂಮಿಯ ಮೇಲಿನ ನೀರಿನ ನಿಕ್ಷೇಪಗಳು ಖಾಲಿಯಾಗುವ ಅಂಚಿನಲ್ಲಿವೆ. ಅಂತರ್ಜಲ ಮಟ್ಟವೂ ವೇಗವಾಗಿ ಕುಸಿಯುತ್ತಿದೆ. ಚೆನ್ನೈ ಸಮೀಪದ ಮೆಡವಕ್ಕಂ ಪಟ್ಟಣದಲ್ಲಿ, ಕೊಳವೆ ಬಾವಿಗಳು (ಬೋರ್ ವೆಲ್) ಏಪ್ರಿಲ್‌ನಲ್ಲಿಯೇ ಬತ್ತಿ ಹೋಗಿದ್ದು ಅಲ್ಲಿನ ಜನರಿಗೆ ಒಂದು ನೀರಿನ ಟ್ಯಾಂಕರ್‌ ಗೆ 1,500 ರೂ. ಕೊಡಬೇಕಾಗಿ ಬಂದಿದೆ.

2. ‘ಅಣ್ಣಾ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರ’ದ ಮಾಜಿ ನಿರ್ದೇಶಕರಾದ ಕೆ.ಪಳನಿವೇಲಿ ಮಾತನಾಡಿ, ನೀರಿನ ಅಸಮರ್ಪಕ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಹೇಳಿದರು.