ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗುವುದು
ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮಮಂದಿರದಲ್ಲಿನ ಶ್ರೀ ರಾಮಲಲ್ಲಾಗೆ ಸೆಖೆಯಿಂದ ತೊಂದರೆಯಾಗಬಾರದೆಂದು ಗರ್ಭಗುಡಿಯಲ್ಲಿ ಕೂಲರ್ ಅನ್ನು ಅಳವಡಿಸಲಾಗಿದೆ. ಶ್ರೀರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ಮಂದಿರ ಸಮಿತಿಯು ಗರ್ಭಗುಡಿಯಲ್ಲಿ ಕೂಲರ್‌ಗಳ ವ್ಯವಸ್ಥೆ ಮಾಡಿದೆ. ಮುಂದೆ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗುವುದು. ಶ್ರೀ ರಾಮನಿಗೆ ಸೆಖೆಯಿಂದ ತೊಂದರೆಯಾಗಬಾರದು ಎಂದು ಅವರ ನೈವೇದ್ಯದಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ನೈವೇದ್ಯದಲ್ಲಿ ಮೊಸರು ಮತ್ತು ಹಾಲಿನಿಂದ ತಯಾರಿಸಿದ ಪಾಯಸವನ್ನು ನೀಡಲಾಗುತ್ತಿದೆ. ಋತುಮಾನದ ಹಣ್ಣುಗಳನ್ನು ಸಹ ಅರ್ಪಿಸಲಾಗುತ್ತಿದೆ. ಅಲ್ಲದೇ, ಶ್ರೀ ರಾಮನಿಗೆ ಕೈಯಿಂದ ನೇಯ್ದ ಬಟ್ಟೆಗಳನ್ನು ಧರಿಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದೂ ಹೊಸ ವರ್ಷದಂದು ಬೆಳ್ಳಿ ಪೀಠದಲ್ಲಿ ಕಲಶವನ್ನು ಸ್ಥಾಪಿಸಲಾಗುವುದು. ಇದಾದ ನಂತರ 9 ದಿನಗಳ ಕಾಲ ಶ್ರೀ ರಾಮಲಲ್ಲಾ ಜೊತೆಗೆ ಶ್ರೀ ದುರ್ಗಾದೇವಿಯ ಪೂಜೆ ಕೂಡ ಮಾಡಲಾಗುವುದು. ಚೈತ್ರ ನವರಾತ್ರಿಯಲ್ಲಿ ನಿಗದಿತ ಪೂಜಾ ವಿಧಾನದ ಪ್ರಕಾರ ಮಾತೃಶಕ್ತಿಯ ಪೂಜೆ ಮಾಡಲಾಗುವುದು. 9 ದಿನಗಳ ಕಾಲ ಪ್ರತಿದಿನ ದುರ್ಗಾ ಸಪ್ತಶತಿ ಪಾರಾಯಣ ನಡೆಯಲಿದೆ. ರಾಮನವಮಿ ತಿಥಿಯಂದು ಶ್ರೀ ರಾಮಲಲ್ಲಾಗೆ 56 ವಿಧದ ನೈವೇದ್ಯಗಳನ್ನು ಅರ್ಪಿಸಲಾಗುವುದು ಮತ್ತು ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು. ದಶಮಿ ತಿಥಿಯಂದು ಪ್ರಸಾದ ವಿತರಣೆ ಕೂಡ ನಡೆಯಲಿದೆ ಎಂದು ಆಚಾರ್ಯ ಸತ್ಯೆಂದ್ರ ದಾಸ ಅವರು ಮಾಹಿತಿ ನೀಡಿದರು.