ತೈಪೈ (ತೈವಾನ್) – ಚೀನಾದ ನೆರೆಯ ತೈವಾನ್ ದ್ವೀಪ ದೇಶದಲ್ಲಿ ಏಪ್ರಿಲ್ 3 ರ ಮುಂಜಾನೆ 7.5 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಲ್ಲಿ ಇದುವರೆಗೆ 7 ಜನರು ಸಾವನ್ನಪ್ಪಿದ್ದಾರೆ ಹಾಗೂ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪ ಜಪಾನ್, ಫಿಲಿಪೈನ್ಸ್ ಮತ್ತು ಚೀನಾದಲ್ಲಿಯೂ ಅರಿವಾಗಿದೆ. ಹವಾಮಾನ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, ಪೂರ್ವ ತೈವಾನ್‌ನ ಹುವಾಲಿಯನ್ ನಗರದಲ್ಲಿ ಭೂಕಂಪ ಆಗಿದೆ. ಅದರ ಕೇಂದ್ರವು ಭೂಮಿಯಿಂದ 34 ಕಿಲೋಮೀಟರ್ ಕೆಳಗೆ ಇತ್ತು. ಈ ಭೂಕಂಪದಿಂದಾಗಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಕಟ್ಟಡಗಳು ಕುಸಿದಿವೆ, ಕೆಲವು ವಾಲಿದವು. ಭೂಕಂಪದ ನಂತರ ಮೊದಲು ಸುನಾಮಿ ಬರುವ ಎಚ್ಚರಿಕೆಗಳನ್ನು ನೀಡಲಾಯಿತು; ಆದರೆ ನಂತರ ಅದನ್ನು ಹಿಂಪಡೆಯಲಾಯಿತು. ಇದು 25 ವರ್ಷಗಳಲ್ಲಿ ತೈವಾನ್‌ನಲ್ಲಿ ಸಂಭವಿಸಿದ ಎಲ್ಲಕ್ಕಿಂತ ಶಕ್ತಿ ಶಾಲಿ ಭೂಕಂಪವಾಗಿದೆ. ಈ ಹಿಂದೆ 1999ರಲ್ಲಿ 7.6 ರಿಕ್ಟರ್ ಭೂಕಂಪ ಸಂಭವಿಸಿತ್ತು. ಅದರಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭೂಕಂಪದಿಂದಾಗಿ 91 ಸಾವಿರಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡವು. ಭೂಕಂಪದಿಂದಾಗಿ ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿದೆ.
ಭೂಕಂಪ ಏಕೆ ಸಂಭವಿಸುತ್ತವೆ ?
ಭೂಮಿಯ ಮೇಲ್ಮೈ ಮುಖ್ಯವಾಗಿ 7 ದೊಡ್ಡ ಮತ್ತು ಅನೇಕ ಸಣ್ಣ ಟೆಕ್ಟೋನಿಕ್ ಪ್ಲೇಟ್‌ಗಳಿಂದ ಕೂಡಿದೆ. ಈ ಪ್ಲೇಟ್ ಗಳು ನಿರಂತರವಾಗಿ ತೇಲುತ್ತವೆ ಮತ್ತು ಕೆಲವೊಮ್ಮೆ ಪರಸ್ಪರ ಡಿಕ್ಕಿ ಹೊಡೆಯುತ್ತವೆ. ಹಲವಾರುಬಾರಿ ಘರ್ಷಣೆಗಳಿಂದಾಗಿ, ಪ್ಲೇಟ್ ಗಳ ಮೂಲೆಗಳು ಬಾಗುತ್ತವೆ ಮತ್ತು ಹೆಚ್ಚಿನ ಒತ್ತಡ ಬಂದಾಗ, ಈ ಪ್ಲೇಟ್ ಗಳು ಒಡೆಯಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಕೆಳಗಿನಿಂದ ಹೊರಗಡೆ ಬೀಳುವ ಶಕ್ತಿಯು ಹೊರಗೆ ಬೀಳುವ ಮಾರ್ಗವನ್ನು ಹುಡುಕುತ್ತದೆ ಮತ್ತು ಈ ಅವಸರದ ನಂತರ ಭೂಕಂಪಗಳು ಆಗುತ್ತವೆ.
ಪ್ರತಿ ವರ್ಷ ಜಗತ್ತಿನಲ್ಲಿ 20 ಸಾವಿರ ಭೂಕಂಪಗಳು ಸಂಭವಿಸುತ್ತವೆ !
ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರವು ಪ್ರತಿ ವರ್ಷ ಸುಮಾರು 20,000 ಭೂಕಂಪಗಳನ್ನು ದಾಖಲಿಸುತ್ತದೆ. ಇವುಗಳಲ್ಲಿ 100 ಭೂಕಂಪಗಳು ಹೆಚ್ಚು ಹಾನಿಯನ್ನುಂಟುಮಾಡುತ್ತವೆ. ಭೂಕಂಪವು ಕೆಲವು ಸೆಕೆಂಡುಗಳು ಅಥವಾ ಕೆಲವು ನಿಮಿಷಗಳವರೆಗೆ ಮಾತ್ರ ಇರುತ್ತದೆ. ಇತಿಹಾಸದಲ್ಲಿ ಎಲ್ಲಕ್ಕಿಂತ ಅಧಿಕ ಕಾಲ ಇರುವ ಭೂಕಂಪವು 2004 ರಲ್ಲಿ ಹಿಂದೂ ಮಹಾಸಾಗರದಲ್ಲಿ ಆಗಿತ್ತು. ಈ ಭೂಕಂಪ 10 ನಿಮಿಷಗಳ ಕಾಲ ಸಂಭವಿಸಿತ್ತು.