Rajnath Singh On POK : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಅದನ್ನು ವಾಪಸ್ ಪಡೆಯುವ ಅಗತ್ಯವಿಲ್ಲ, ಅಲ್ಲಿಯ ಜನರೇ ಭಾರತಕ್ಕೆ ಬರುತ್ತಾರೆ !

ರಕ್ಷಣಾ ಸಚಿವ ರಾಜನಾಥ್ ಸಿಂಗ್ ದಾವೆ !

ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ – ಭಾರತವು ಇಲ್ಲಿಯವರೆಗೆ ಜಗತ್ತಿನ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಅಥವಾ ಯಾರೊಬ್ಬರ ಒಂದು ಇಂಚು ಭೂಮಿಯನ್ನು ಸಹ ವಶಪಡಿಸಿಕೊಂಡಿಲ್ಲ, ಇದು ನಮ್ಮ ಇತಿಹಾಸವಾಗಿದೆ. (ಭಾರತವು ತನ್ನ ಮೇಲಿನ ದಾಳಿಯಲ್ಲಿ ಕಳೆದುಕೊಂಡ ಸ್ವಂತ ಭೂಮಿಯನ್ನು ಸಹ ಎಂದಿಗೂ ಮರಳಿ ಪಡೆದಿಲ್ಲ, ಇದು ಕೂಡ ಇತಿಹಾಸವಾಗಿದೆ. ಈ ಇತಿಹಾಸವನ್ನು ಬದಲಾಯಿಸಲು ಭಾರತ ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು) ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮದಾಗಿತ್ತು ಮತ್ತು ನಮ್ಮದೇ ಆಗಿದೆ’, ಎಂದು ನಾನು ಹೇಳುತ್ತೇನೆ. ಅಲ್ಲಿನ ಜನರು ತಾವಾಗಿಯೇ ಭಾರತಕ್ಕೆ ಬರುತ್ತಾರೆ ಎಂದು ನಾನು ನಂಬುತ್ತೇನೆ. ಈಗಲೂ ಕೂಡ ಅಲ್ಲಿನ ಜನರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ದೇಶದ ಭದ್ರತೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರು ಹೇಳಿದ ಅಂಶಗಳು !

1. ಸದ್ಯ ಚೀನಾದಿಂದ ಭಾರತಕ್ಕೆ ಯಾವುದೇ ಅಪಾಯವಿದ್ದರೂ ಅದನ್ನು ನಾವು ಎದುರಿಸುತ್ತೇವೆ. ಭಾರತ ಈಗ ದುರ್ಬಲವಾಗಿಲ್ಲ, ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ.

2. ‘ಭಾರತದ 2 ಸಾವಿರ ಚದರ ಕಿಲೋಮೀಟರ್ ಪ್ರಸ್ತುತ ಚೀನಾದ ವಶದಲ್ಲಿದೆ’ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮವನ್ನು ಪ್ರಶ್ನಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. 1962ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಚೀನಾ ಭಾರತದ ಎಷ್ಟು ಭೂಮಿಯನ್ನು ವಶಪಡಿಸಿಕೊಂಡಿತ್ತು? ಅದನ್ನೆಲ್ಲ ನಾನು ನಿಮಗೆ ನೆನಪಿಸಲು ಬಯಸುವುದಿಲ್ಲ; ಆದರೆ ಖಚಿತವಾಗಿ, ನಾವು ಭಾರತದ ಒಂದು ಇಂಚು ಭೂಮಿಯನ್ನು ಸಹ ಬಿಡುವುದಿಲ್ಲ. ಅನೇಕ ವಿಷಯಗಳನ್ನು ನಾನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ; ಏಕೆಂದರೆ ಭಾರತ ಮತ್ತು ಚೀನಾ ನಡುವೆ ಸದ್ಯ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

3. ಭಗವಂತ ಚೀನಾಗೆ ಸದ್ಬುದ್ಧಿ ನೀಡಲಿ ಮತ್ತು ಭಾರತದ ಮೇಲೆ ದಾಳಿ ಮಾಡಲು ಅದು ಪ್ರಯತ್ನಿಸದಿರಲಿ. ಭಾರತದ ವೈಶಿಷ್ಟ್ಯವೆಂದರೆ ಭಾರತವು ಯಾರನ್ನೂ ದೂಷಿಸುವುದಿಲ್ಲ; ಆದರೆ ಯಾರಾದರೂ ಭಾರತದ ಗೌರವಕ್ಕೆ ಧಕ್ಕೆ ತಂದರೆ ಅಂಥವರಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಭಾರತಕ್ಕಿದೆ. ನಾವು ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. (ಭಾರತವು ತನ್ನ ನೆರೆಹೊರೆಯವರಿಂದ ಇದನ್ನು ನಿರೀಕ್ಷಿಸುತ್ತಿರುವಾಗ ನಾವು ಬಲಿಷ್ಠರಾಗಿರುವುದು ಮುಖ್ಯವಾಗಿದೆ. ಚಿಕ್ಕ ದೇಶವಾದ ಮಾಲ್ಡೀವ್ಸ್ ಕೂಡ ಈಗ ಚೀನಾದ ಬೆಂಬಲದೊಂದಿಗೆ ಭಾರತವನ್ನೇ ಕಣ್ಣೆತ್ತಿ ನೋಡುತ್ತಿದೆ, ಇಂತಹ ವಿಷಯವನ್ನೂ ಸಹ ಪರಿಗಣಿಸಬೇಕಾಗಿದೆ ! – ಸಂಪಾದಕರು)