MP Oldest Temple : ಮಧ್ಯಪ್ರದೇಶದ ಉತ್ಖನನದಲ್ಲಿ ಕಂಡುಬಂದ ಭಾರತದ ಅತ್ಯಂತ ಹಳೆಯ ದೇವಾಲಯ ಮತ್ತು ಶಿವಲಿಂಗ !

ಪನ್ನಾ (ಮಧ್ಯಪ್ರದೇಶ) – ಭಾರತದ ಪುರಾತತ್ವ ಇಲಾಖೆಯು ಇಲ್ಲಿನ ನಾಚನ ಕುಠಾರ ಗ್ರಾಮದಲ್ಲಿ ನಡೆಸುತ್ತಿರುವ ಉತ್ಖನನದಲ್ಲಿ ಅತ್ಯಂತ ಪುರಾತನ ದೇವಾಲಯ ಮತ್ತು ಶಿವಲಿಂಗವು ಪತ್ತೆಯಾಗಿವೆ. ಈ ಶಿವಲಿಂಗವು ಮೊದಲನೇ ಅಥವಾ 5ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಇಲ್ಲಿನ ಚೌಮುಖನಾಥ ದೇವಾಲಯದ ಸುತ್ತಲಿನ ಅವಶೇಷಗಳಲ್ಲಿ ಮಾರ್ಚ್ 4 ರಿಂದ ಉತ್ಖನನ ನಡೆಸಲಾಗುತ್ತಿದೆ.

1. ಭಾರತೀಯ ಪುರಾತತ್ವ ಇಲಾಖೆಯ ಜಬಲ್ಪುರ ಪ್ರದೇಶದ ಪುರಾತತ್ವ ಶಾಸ್ತ್ರಜ್ಞ ಡಾ. ಶಿವಕಾಂತ್ ವಾಜಪೇಯಿ ಅವರ ನೇತೃತ್ವದಲ್ಲಿ ದೇವಸ್ಥಾನದ ಆವರಣದ ಬಳಿ ಇರುವ 8 ದಿಬ್ಬಗಳ ಪೈಕಿ 2ರ ಸುತ್ತ ಉತ್ಖನನ ಕಾರ್ಯ ನಡೆಯುತ್ತಿದೆ. 15 ದಿನಗಳ ಉತ್ಖನನದ ನಂತರ, ಇಲ್ಲಿನ ಪಾರ್ವತಿ ದೇವಸ್ಥಾನದಿಂದ 33 ಮೀಟರ್ ದೂರದಲ್ಲಿರುವ ಅವಶೇಷದಿಂದ ಶಿವಲಿಂಗವು ಸಿಕ್ಕಿದೆ. ಇದು ಗುಪ್ತರ ಕಾಲದ ಶಿವಲಿಂಗ ಎಂದು ನಂಬಲಾಗುತ್ತಿದೆ. ಶಿವಲಿಂಗ ಯಾವುದರಿಂದ ಮಾಡಲಾಗಿದೆ ?, ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಈ ಉತ್ಖನನದಲ್ಲಿ ಮತ್ತಷ್ಟು ಐತಿಹಾಸಿಕ ವಸ್ತುಗಳು ಸಿಗಲಿವೆ ಎಂದು ವಾಜಪೇಯಿ ಅವರು ಹೇಳಿದ್ದಾರೆ.

2. ಈ ಶಿವಲಿಂಗ ಪತ್ತೆ ಆಗಿರುವ ಗ್ರಾಮವು ಗುಪ್ತರ ಕಾಲದ ಒಂದು ಸಮೃದ್ಧ ವ್ಯಾಪಾರ ಕೇಂದ್ರವಾಗಿದ್ದಿರಬಹುದು ಎಂದು ವಾಜಪೇಯಿ ಅವರು ಹೇಳಿದ್ದಾರೆ. ಪುರಾತತ್ವ ಇಲಾಖೆಯ ಮೊದಲ ಮಹಾನಿರ್ದೇಶಕರಾಗಿದ್ದ ಜನರಲ್ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಈ ಗ್ರಾಮದಲ್ಲಿ 2 ಹಳೆಯ ದೇವಾಲಯಗಳನ್ನು ಪತ್ತೆ ಹಚ್ಚಿದ್ದರು. 1885 ರಲ್ಲಿ ಈ ಬಗ್ಗೆ ಒಂದು ವರದಿಯನ್ನು ಪ್ರಕಟಿಸಲಾಗಿತ್ತು, ಅದರಲ್ಲಿ ಮೊದಲು ಪಾರ್ವತಿ ದೇವಾಲಯ ಮತ್ತು ನಂತರ ಚತುರ್ಮುಖ ಶಿವ ದೇವಾಲಯದ ಬಗ್ಗೆ ಉಲ್ಲೇಖಿಸಲಾಗಿತ್ತು. ಅಂದಿನಿಂದ ಈ ಸ್ಥಳವನ್ನು ಐತಿಹಾಸಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ವಾಜಪೇಯಿ ಮಾಹಿತಿ ನೀಡಿದರು.

3. ಪುರಾತತ್ವಶಾಸ್ತ್ರಜ್ಞ ಡಾ. ನಾರಾಯಣ ವ್ಯಾಸ್ ಅವರ ಪ್ರಕಾರ, ನೃತ್ಯ ಮಾಡುತ್ತಿರುವ ಪಾರ್ವತಿ ದೇವಿಯ ಮಂದಿರವು ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಎರಡು ಅಂತಸ್ತಿನದ್ದಾಗಿದ್ದು, ಇದರಲ್ಲಿ ಮಂಟಪ ಮತ್ತು ಗರ್ಭಗುಡಿಯಿದೆ. ಇದರ ಛಾವಣಿ ಸಮತಟ್ಟಾಗಿರುವುದರಿಂದ ಈ ದೇವಾಲಯದ ಶಿಖರ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿರಲಿಲ್ಲ ಎಂಬುದು ತಿಳಿದು ಬರುತ್ತದೆ. ದೇವಾಲಯದ ಪ್ರವೇಶದ್ವಾರದಲ್ಲಿ ಗಂಗಾ ಮತ್ತು ಯಮುನೆಯ ಸುಂದರ ಚಿತ್ರವನ್ನು ಕೆತ್ತಲಾಗಿದೆ.

4. ದೇವಾಲಯದ ಗೋಡೆಗಳ ಮೇಲೆ ಕೆಲವು ಪೌರಾಣಿಕ ಕಥೆಗಳನ್ನು ಸಹ ಚಿತ್ರಿಸಲಾಗಿದೆ. ಈ ಕೆತ್ತನೆಗಳು ಗುಪ್ತರ ಶೈಲಿಯದ್ದಾಗಿವೆ. ದೇವಾಲಯದ ವಾಸ್ತುಶಿಲ್ಪವು ಗುಹೆ ದೇವಾಲಯಗಳಿಂದ ಪ್ರಾರಂಭವಾಯಿತು. ಹೀನಯಾನ ಬೌದ್ಧ ಸಂಪ್ರದಾಯದ ಗುಹೆಗಳನ್ನು ಲೆಣಿ ಅಜಂತಾದಲ್ಲಿ ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ನಿರ್ಮಿಸಲಾಯಿತು.

5. ವಿದಿಶಾ ಸಮೀಪದಲ್ಲಿ ಒಂದು ಹಳೆಯ ದೇವಾಲಯದ ತಳಹದಿಯ ಅವಶೇಷಗಳು ಪತ್ತೆಯಾಗಿವೆ. ಇದು ಬಹುಶಃ ಮರದಿಂದ ಮಾಡಲ್ಪಟ್ಟಿದೆ ಮತ್ತು ಕ್ರಿ.ಪೂ. ಎರಡನೇ ಶತಮಾನದ್ದಾಗಿದೆ. ಇಲ್ಲಿ ಗರುಡ ಕಂಬವಿದ್ದು, ಇದನ್ನು ಸ್ಥಳೀಯರು ‘ಖಮ್ಮ ಬಾಬಾ’ ಎಂದು ಕರೆಯುತ್ತಾರೆ ಎಂದು ಡಾ.ವ್ಯಾಸ್ ಅವರು ತಿಳಿಸಿದರು.