ಬದಾಯೂ (ಉತ್ತರಪ್ರದೇಶ) – ಇಲ್ಲಿನ ಇಬ್ಬರು ಹಿಂದೂ ಮಕ್ಕಳ ಹತ್ಯಾಕಾಂಡದ ಪ್ರಕರಣದಲ್ಲಿ ಪರಾರಿಯಾಗಿದ್ದ ೨ನೇ ಆರೋಪಿ ಜಾವೇದನನ್ನ ಪೊಲೀಸರು ಬರೇಲಿಯಲ್ಲಿ ಬಂಧಿಸಿದ್ದಾರೆ. ಮಾರ್ಚ್ ೧೯ ರಂದು ಸಂಜೆ ಬದಾಯೂದಲ್ಲಿನ ಸಾಧೂ ಕಾಲೋನಿಯಲ್ಲಿ ಸಾಜಿದ ಮತ್ತು ಜಾವೇದನು ಇಬ್ಬರು ಹಿಂದೂ ಸಹೋದರರ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು. ಈ ಘಟನೆಯ ನಂತರ ಘಟನಾಸ್ಥಳದಿಂದ ಪರಾರಿಯಾಗಿದ್ದ ಸಾಜಿದನು ಪೋಲೀಸರ ಚಕಮಕಿಯಲ್ಲಿ ಮೃತನಾದರೆ ಅವನ ಸಹೋದರ ಜಾವೇದನು ಪರಾರಿಯಾಗಿದ್ದನು. ಈ ಹತ್ಯಾಕಾಂಡದ ನಂತರ ಆಕ್ರೋಶಗೊಂಡ ಸ್ಥಳಿಯರು ಸಾಜಿದನ ಅಂಗಡಿಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಈ ಹತ್ಯಾಕಾಂಡದ ನಂತರ ಒಂದು ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ಜಾವೇದನು, `ನನಗೆ ಈ ಹತ್ಯೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಇದೆಲ್ಲವನ್ನೂ ನನ್ನ ಸಹೋದರ ಮಾಡಿದ್ದಾನೆ’ ಎಂದು ಹೇಳಿದ್ದಾನೆ.
೧. ಜಾವೇದ ಹಾಗೂ ಸಾಜಿದ ಸಹೋದರರಾಗಿದ್ದಾರೆ. ಪೊಲೀಸರು ಸಾಜಿದನನ್ನು ಚಕಮಕಿಯಲ್ಲಿ ಕೊಂದ ನಂತರ ಆತನ ಕಿಸೆಯಿಂದ ಬಂದೂಕು ಜಪ್ತು ಮಾಡಿದ್ದಾರೆ. ಈ ಬಂದೂಕಿನಿಂದ ಸಾಜಿದನು ಪೋಲೀಸರ ಮೇಲೆ ಗುಂಡು ಹಾರಿಸಿದ್ದನು.
೨. ಪ್ರಾಣಿ ಹತ್ಯೆಗಾಗಿ ಬಳಸಲಾಗುವ ದೊಡ್ಡ ಚಾಕುವಿನಿಂದ ಮಕ್ಕಳ ಹತ್ಯೆ ಮಾಡಲಾಗಿತ್ತು. ಆ ದೊಡ್ಡ ಚಾಕು ಹಾಗೂ ೪ ಮದ್ದುಗುಂಡುಗಳು ಸಾಜಿದನ ಮೃತದೇಹದ ಬಳಿ ದೊರೆತಿದ್ದವು. ಇವುಗಳನ್ನು ಜಪ್ತು ಮಾಡಲಾಗಿದೆ.
೩. ಇಲ್ಲಿಯ ವರೆಗೆ ಮಕ್ಕಳ ಹತ್ಯೆಯ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ತಂದೆ ಹಾಗೂ ಚಿಕ್ಕಪ್ಪನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
೪. ಹತ್ಯೆಗೊಳಗಾದ ಮಕ್ಕಳ ತಾಯಿ ಸಂಗೀತಾರವರು ಮಾತನಾಡುತ್ತ `ಜಾವೇದನು ಸುಳ್ಳು ಹೇಳುತ್ತಿದ್ದಾನೆ. ಅವನಿಗೆ ಎಲ್ಲವೂ ತಿಳಿದಿತ್ತು. ಅವನೇ ನನ್ನ ಮಕ್ಕಳ ಹತ್ಯೆ ಮಾಡಿದ್ದಾನೆ,’ ಎಂದು ಹೇಳಿದರು. ಮೃತ ಮಕ್ಕಳ ಅಜ್ಜಿ ಮುನ್ನಿದೇವಿಯವರು, `ಜಾವೇದನೇ ನನ್ನ ಇಬ್ಬರು ಮೊಮ್ಮಕ್ಕಳನ್ನು ಕೊಂದಿದ್ದಾನೆ, ಅವನ ವಿಚಾರಣೆ ಮಾಡಿ. ಅವನು ಸುಳ್ಳು ಹೇಳುತ್ತಿದ್ದಾನೆ’, ಎಂದು ಹೇಳಿದರು.