೩ ಸೌರಶಕ್ತಿ ಯೋಜನೆಗಳಿಂದ ಚೀನಾವನ್ನು ತೆರೆವುಗೊಳಿಸಿ ಭಾರತದ ಜೊತೆಗೆ ಒಪ್ಪಂದ ಮಾಡಿದ ಶ್ರೀಲಂಕಾ !

ಅಸಮಾಧಾನಗೊಂಡ ಚೀನಾ; ಶ್ರೀಲಂಕಾಗೆ ನೀಡುತ್ತಿದ್ದ ಸಹಾಯ ಬಂದ್ !

ಕೊಲಂಬೋ (ಶ್ರೀಲಂಕಾ) – ಶ್ರೀಲಂಕಾವು ತನ್ನ ಮೂರು ಸೌರ ಶಕ್ತಿ ಯೋಜನೆಯಗಳ ಕಾರ್ಯವನ್ನು ಈ ಹಿಂದೆ ಚೀನಾದ ಕಂಪನಿಯೊಂದಕ್ಕೆ ನೀಡಿತ್ತು ; ಆದರೆ ಚೀನಾದ ಜೊತೆಗಿನ ಒಪ್ಪಂದ ರದ್ದುಪಡಿಸಿ ಶ್ರೀಲಂಕಾ ಇದೀಗ ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ೨ ಸಾವಿರ ೨೩೦ ಕಿಲೋವ್ಯಾಟ್ ಕ್ಷಮತೆಯ ಸೌರ ಶಕ್ತಿ ಯೋಜನೆ ಇದಾಗಿದ್ದು, ಇದಕ್ಕಾಗಿ ಭಾರತ ಸರಕಾರವು ಸಾಲದ ಬದಲು ಶ್ರೀಲಂಕಾಗೆ ಒಂದು ಕೋಟಿ ಹತ್ತು ಲಕ್ಷ ಡಾಲರ್ (ಸುಮಾರು ೯೦ ಕೋಟಿ ರೂಪಾಯಿ )ಅನುದಾನ ನೀಡಲಿದೆ. ಇದು ಭಾರತದ ರಾಜತಾಂತ್ರಿಕ ನೀತಿಗೆ ದೊರೆತ ಯಶಸ್ಸು ಎಂದು ನಂಬಲಾಗುತ್ತಿದೆ.

ಶ್ರೀಲಂಕಾದಿಂದ ನೈನಾತಿವು , ಡೆಲ್ಫ್ಟ ( ನೆದುನಥಿವು ) ಮತ್ತು ಅನಾಲಾಯಿತಿವು ದ್ವೀಪದಲ್ಲಿ ಸೌರ ಶಕ್ತಿ ನಿರ್ಮಾಣ ಮಾಡುವುದಕ್ಕಾಗಿ ಚೀನಾ ಜೊತೆ ಒಪ್ಪಂದ ಮಾಡಿಕೊಂಡಿತ್ತು . ಶ್ರೀಲಂಕಾ ಈ ಒಪ್ಪಂದವನ್ನು ರದ್ದುಮಾಡಿದ್ದಕ್ಕೆ ಅಸಮಾಧಾನಗೊಂಡ ಚೀನಾ, ಶ್ರೀಲಂಕಾದ ನಾಗರಿಕರಿಗೆ ನೀಡುತ್ತಿದ್ದ ಸಹಾಯವನ್ನು ನಿಲ್ಲಿಸುವ ತಯಾರಿಯಲ್ಲಿದೆ ಹಾಗೂ ಶ್ರೀಲಂಕಾದ ಮೇಲೆ ಒತ್ತಡ ಹೇರಲು ಕೂಡ ಪ್ರಯತ್ನಿಸುತ್ತಿದೆ. ಶ್ರೀಲಂಕಾದಲ್ಲಿನ ‘ಚೈನಾ ಫೌಂಡೇಶನ್ ಫಾರ್ ರೂರಲ್ ಡೆವಲಪ್ಮೆಂಟ್’ ಯೋಜನೆಯಡಿ ನಡೆಸಲಾಗುವ ‘ಸ್ಮೈಲಿಂಗ್ ಚಿಲ್ಡ್ರನ್ ಫುಡ್ ಪ್ಯಾಕೇಜ್’ ದಲ್ಲಿನ ಸಹಾಯವನ್ನು ಚೀನಾ ಕಡಿತಗೊಳಿಸಿದೆ. ಈ ಯೋಜನೆಯಡಿ ಪ್ರತಿ ದಿನ ೧೪೨ ಶಾಲೆಗಳಲ್ಲಿನ ೧೦ ಸಾವಿರ ವಿದ್ಯಾರ್ಥಿಗಳಿಗೆ ರೇಷನ್ ತಲುಪಿಸಲಾಗುತ್ತಿತ್ತು. ಈ ಸೌಕರ್ಯವನ್ನು ಕೂಡಲೇ ನಿಲ್ಲಿಸಲಾಗುವುದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸಂಪಾದಕೀಯ ನಿಲುವು

ಚೀನಾದಿಂದ ತನಗೆ ಭವಿಷ್ಯದಲ್ಲಿ ಅಪಾಯವಿದೆ ಎಂದು ಅರಿತ ಶ್ರೀಲಂಕಾ ಇದೀಗ ಚೀನಾದ ಸಾಲದ ಬಲೆಯಿಂದ ಹೊರಬರಲು ತನ್ನ ನಿಜ ಸ್ನೇಹಿತನಾದ ಭಾರತದ ಜೊತೆ ಮತ್ತೊಮ್ಮೆ ಕೈಜೋಡಿಸಿದೆ. ಶ್ರೀಲಂಕಾದಂತೆ ಮಾಲ್ಡೀವ್ಸ್ ಗೆ ಕೂಡ ತನ್ನ ತಪ್ಪಿನ ಅರಿವಾಗುವುದೆಂದು ಅಪೇಕ್ಷೆ !