ಅಯೋಧ್ಯೆ: ಶ್ರೀರಾಮ ಮಂದಿರಕ್ಕೆ ಹೋಗುವ ಭಕ್ತರಿಗಾಗಿ ಹೊಸ ನಿಯಮಾವಳಿ ಜಾರಿ !

ಅಯೋಧ್ಯ – ಶ್ರೀರಾಮ ಜನ್ಮಭೂಮಿ ಮಂದಿರ ಟ್ರಸ್ಟ್ ವತಿಯಿಂದ ಭಕ್ತರಿಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ . ಶ್ರೀರಾಮ ಮಂದಿರದಲ್ಲಿ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಜನ ದರ್ಶನಕ್ಕಾಗಿ ಬರುತ್ತಿದ್ದಾರೆ, ಹಾಗಾಗಿ ಈ ನಿಯಮಗಳನ್ನು ರೂಪಿಸಲಾಗಿದೆ ಎಂದು, ರಾಮ ಜನ್ಮ ಭೂಮಿ ಟ್ರಸ್ಟ್ ತಿಳಿಸಿದೆ.

೧. ಮಂದಿರ ಬೆಳಿಗ್ಗೆ ೬.೩೦ ರಿಂದ ರಾತ್ರಿ ೯.೩೦ ವರೆಗೂ ಭಕ್ತರಿಗಾಗಿ ತೆರೆದಿರುತ್ತದೆ.

೨. ಮಂದಿರದಲ್ಲಿ ಪ್ರವೇಶ ಮಾಡಿದ ನಂತರ ದರ್ಶನ ಪಡೆದು ಹೊರಗೆ ಬರುವವರೆಗಿನ ಪ್ರಕ್ರಿಯೆಯನ್ನು ಈಗ ಅತ್ಯಂತ ಸುಲಭಗೊಳಿಸಲಾಗಿದೆ. ಭಕ್ತರು ೬೦ ರಿಂದ ೭೫ ನಿಮಿಷದೊಳಗೆ (ಒಂದರಿಂದ ಒಂದು ಕಾಲ ಗಂಟೆಯಲ್ಲಿ) ಪ್ರಭು ಶ್ರೀ ರಾಮನ ದರ್ಶನ ಪಡೆಯಬಹುದು.

೩. ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್, ಚಪ್ಪಲಿ, ಪರ್ಸ್ ಮುಂತಾದ ಮಹತ್ವದ ವಸ್ತುಗಳನ್ನು ದೇವಸ್ಥಾನದ ಹೊರಗಡೆ ಇಡಬೇಕು, ಇದರಿಂದ ಭಗವಂತನ ದರ್ಶನ ಇನ್ನೂ ಸರಾಗವಾಗಿ ಆಗಬಹುದು.

೪. ಮಂದಿರದೊಳಗೆ ಹೂವು, ಹಾರ, ಪ್ರಸಾದ ಮುಂತಾದವುಗಳನ್ನು ತೆಗೆದುಕೊಂಡು ಹೋಗಬಾರದು.

೫. ಬೆಳಗಿನ ಜಾವ ೪ ಗಂಟೆಗೆ ಶ್ರೀರಾಮಲಲ್ಲಾನ ಮಂಗಳಾರತಿ, ಬೆಳಿಗ್ಗೆ ೬.೧೫ ಕ್ಕೆ ಶೃಂಗಾರ ಆರತಿ ಮತ್ತು ರಾತ್ರಿ ೧೦ ಗಂಟೆಗೆ ಶಯನಾರತಿ ನಡೆಯುತ್ತದೆ. ಈ ಮೂರು ಆರತಿಗಳಿಗೆ ಉಪಸ್ಥಿತ ಇರಲು ಪ್ರವೇಶ ಪತ್ರ ಅನಿವಾರ್ಯವಾಗಿದೆ. ಆದರೆ ಇತರ ಆರತಿಗಳಿಗೆ ಪ್ರವೇಶ ಪತ್ರ ಕಡ್ಡಾಯವಿಲ್ಲ.

೬. ಈ ಪ್ರವೇಶ ಪತ್ರವು ಉಚಿತವಾಗಿದ್ದು, ಇದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಜಾಲತಾಣದಲ್ಲಿ ಕೂಡ ಉಪಲಬ್ಧವಿದೆ. ಪ್ರವೇಶ ಪಾತ್ರದಲ್ಲಿ ಭಕ್ತರ ಹೆಸರು, ವಯಸ್ಸು, ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಮತ್ತು ನಗರದ ಹೆಸರು ಇರುವುದು ಕಡ್ಡಾಯವಾಗಿದೆ.

೭. ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಅಥವಾ ವಿಶೇಷ ಪ್ರವೇಶ ಪತ್ರ ಕೂಡ ನೀಡುತ್ತಿಲ್ಲ. ಆದ್ದರಿಂದ ಶ್ರೀರಾಮ ಭಕ್ತರು ‘ವಿಶೇಷ ಶುಲ್ಕ ನೀಡಿದರೆ ದರ್ಶನ ಸಿಗುತ್ತದೆ’ ಎಂಬಂತಹ ಮೋಸಕ್ಕೆ ಬಲಿಯಾಗಬಾರದು.

೮. ದೇವಸ್ಥಾನಕ್ಕೆ ಬರುವ ವೃದ್ಧರು ಮತ್ತು ವಿಕಲಾಂಗ ಭಕ್ತರಿಗಾಗಿ ವೀಲ್ ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಕುರ್ಚಿಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.