Electoral Bond : ಒಂದೇ ದಿನದಲ್ಲಿ ಎಲ್ಲಾ ಮಾಹಿತಿಯನ್ನು ಸಲ್ಲಿಸಿರಿ ! – ಸರ್ವೋಚ್ಚ ನ್ಯಾಯಾಲಯದಿಂದ ಸ್ಟೇಟ್ ಬ್ಯಾಂಕಿಗೆ ಆದೇಶ

‘ಚುನಾವಣಾ ಬಾಂಡ್ ಯೋಜನೆ’ ಅಡಿಯಲ್ಲಿ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಒದಗಿಸುವ ಪ್ರಕರಣ

ನವ ದೆಹಲಿ – ರಾಜಕೀಯ ಪಕ್ಷಗಳಿಗೆ `ಚುನಾವಣಾ ಬಾಂಡ್ ಯೋಜನೆ’ ರದ್ದುಗೊಳಿಸಿದ ನಂತರ, ಕಳೆದ ತಿಂಗಳು, ಸರ್ವೋಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿ 2019 ರಿಂದ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ ಆದೇಶ ನೀಡಿತ್ತು. ಈ ಮಾಹಿತಿಯನ್ನು ನೀಡುವ ಗಡುವು ಮಾರ್ಚ್ 6 ರಂದು ಕೊನೆಗೊಂಡಿತು. ಅದಕ್ಕಿಂತ ಮೊದಲೇ ಬ್ಯಾಂಕ ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸಲು ಅರ್ಜಿಯನ್ನು ಸಲ್ಲಿಸಿತ್ತು. ನ್ಯಾಯಾಲಯವು ಅದನ್ನು ತಿರಸ್ಕರಿಸುತ್ತಾ, ಬ್ಯಾಂಕಿಗೆ ಛೀಮಾರಿ ಹಾಕಿದೆ. ಈ ನಿಟ್ಟಿನಲ್ಲಿ, ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಅವರು ಮಾತನಾಡಿ, ಬ್ಯಾಂಕು ಅವಧಿ ವಿಸ್ತರಣೆಯ ಅರ್ಜಿಯಲ್ಲಿ ನೀಡಲಾದ ವಿವರಗಳ ಪ್ರಕಾರ ಯಾವ ಮಾಹಿತಿಯನ್ನು ಕೋರಲಾಗಿದೆಯೋ, ಅ ಮಾಹಿತಿ ಸಿದ್ಧವಾಗಿದೆಯೆಂದು ಕಂಡು ಬರುತ್ತಿದೆ. ಹಾಗಾಗಿ ಜೂನ್ 30ರವರೆಗೆ ಕಾಲಾವಕಾಶ ನೀಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಹಾಗೆಯೇ ಅವರು ಬ್ಯಾಂಕಿಗೆ ಎಲ್ಲ ಮಾಹಿತಿಯನ್ನು 24 ಗಂಟೆಯೊಳಗೆ ಸಲ್ಲಿಸುವಂತೆ ಆದೇಶಿಸಿದರು.

ಬ್ಯಾಂಕ್ ಪರವಾಗಿ ಹೋರಾಡುತ್ತಿರುವ ನ್ಯಾಯವಾದಿಗಳ ಯುಕ್ತಿವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ನಿಮಗೆ ಕೇವಲ ಸೀಲ್ ಮಾಡಿದ ಪಾಕೀಟುಗಳನ್ನು ತೆರೆದು, ಮಾಹಿತಿಯನ್ನು ಪಡೆದು ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ ಅಷ್ಟೇ ಎಂದು ಹೇಳಿತು. ಈ ಸಮಯದಲ್ಲಿ ವಿಭಾಗೀಯಪೀಠವು ಬ್ಯಾಂಕಿಗೆ ಛೀಮಾರಿ ಹಾಕುವಾಗ ಈ ಆದೇಶದ ಪಾಲನೆಯಾಗದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಕೊಳ್ಳಬಹುದಾಗಿದೆ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಏನಿತ್ತು ?

ಫೆಬ್ರವರಿ 15, 2024 ರಂದು ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಪಕ್ಷಗಳಿಗಾಗಿ ಇರುವ `ಚುನಾವಣಾ ಬಾಂಡ್ ಯೋಜನೆ’ಯನ್ನು ರದ್ದುಗೊಳಿಸುವಂತೆ ತೀರ್ಪು ನೀಡಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಚುನಾವಣಾ ಬಾಂಡ ಯೋಜನೆಯಿಂದ ಸಂವಿಧಾನದ ಕಲಂ 19(1)(ಅ) ಅಡಿಯಲ್ಲಿರುವ ಮಾಹಿತಿ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ಆದುದರಿಂದ ಚುನಾವಣಾ ಬಾಂಡ ಯೋಜನೆ ಸಂವಿಧಾನದ ವಿರುದ್ಧವಾಗಿದೆ. ರಾಜಕೀಯ ಪಕ್ಷಗಳಿಗೆ ಅಪರಿಮಿತ ಹಣ ಸಿಗಬೇಕೆಂದು ಕಾನೂನಿನಲ್ಲಿ ಬದಲಾವಣೆ ಮಾಡುವುದು ತಪ್ಪಾಗಿದೆ ಎಂದು ಹೇಳಿತ್ತು.

ಚುನಾವಣಾ ಬಾಂಡ್ ಯೋಜನೆ ಎಂದರೇನು?

2018ರಲ್ಲಿ ಕೇಂದ್ರದ ಭಾಜಪ ಸರಕಾರವೇ ಈ ಯೋಜನೆಯನ್ನು ಆರಂಭಿಸಿತ್ತು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮಾಧ್ಯಮವೆಂದರೆ ಚುನಾವಣಾ ಬಾಂಡ. ಈ ಯೋಜನೆಯ ಮೂಲಕ, ದಾನಿಗಳ ಹೆಸರನ್ನು ರಹಸ್ಯವಾಗಿಟ್ಟು, ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಅನುಕೂಲ ಮಾಡಿಕೊಡಲಾಗಿತ್ತು. ಕೇವಲ ಸ್ಟೇಟ ಬ್ಯಾಂಕ ಆಫ್ ಇಂಡಿಯಾದ ಅಧಿಕೃತ ಶಾಖೆಯಲ್ಲಿ ವರ್ಷದ ಪೂರ್ವನಿರ್ಧರಿತ ದಿನಗಳಲ್ಲಿ ಮಾತ್ರ ಈ ಬಾಂಡ್ ವಿತರಿಸಲಾಗುತ್ತಿತ್ತು. ಅದರ ಸ್ವರೂಪವು ಪ್ರತಿಜ್ಞಾ ಪತ್ರದಂತೆ(ಪ್ರಾಮಿಸರಿ ನೋಟ) ಇತ್ತು. ಈ ಬಾಂಡಗಳ ಮೌಲ್ಯವು 1 ಸಾವಿರ, 10 ಸಾವಿರ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂಪದಲ್ಲಿತ್ತು. ಈ ಬಾಂಡಗಳನ್ನು ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಉದ್ಯಮ ಸಮೂಹ ಸಂಸ್ಥೆಗಳು ಖರೀದಿಸಿ ಅವರ ಆಯ್ಕೆಯ ರಾಜಕೀಯ ಪಕ್ಷಕ್ಕೆ ನೀಡಬಹುದಾಗಿತ್ತು. ಈ ಬಾಂಡ 15 ದಿನಗಳಲ್ಲಿ ಪರಿವರ್ತಿಸುವ ಅವಕಾಶವನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿತ್ತು.