Bomb Threat Temple Karnataka : ನಿಪ್ಪಾಣಿಯಲ್ಲಿ ಶ್ರೀರಾಮ ಮಂದಿರವನ್ನು ಸ್ಫೋಟಿಸುವುದಾಗಿ ಅನಾಮಧೇಯ ಬೆದರಿಕೆಯ ಪತ್ರ !

ನಿಪ್ಪಾಣಿ – ಇಲ್ಲಿನ ಹಳೆ ಪಿಬಿ ರಸ್ತೆಯಲ್ಲಿ ಶ್ರೀರಾಮ ಮಂದಿರವನ್ನು ಸ್ಫೋಟಿಸುವುದಾಗಿ 2 ಅನಾಮಧೇಯ ಪತ್ರಗಳ ಮೂಲಕ ಬೆದರಿಕೆ ಹಾಕಲಾಗಿದೆ. ಪತ್ರದಲ್ಲಿ ಟ್ರಸ್ಟಿಗಳನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರ ಸೂಚನೆಯಂತೆ ಟ್ರಸ್ಟಿಗಳು ದೇವಸ್ಥಾನದ ಆವರಣದಲ್ಲಿ ‘ಸಿಸಿಟಿವಿ’ ಅಳವಡಿಸಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

1. ಮೊದಲ ಪತ್ರವು ದೇವಾಲಯದ ಗಾರ್ಭಗುಡಿಯ ಬಳಿ ಕಂಡುಬಂದರೆ, ಎರಡನೆಯ ಪತ್ರವು ಹನುಮಾನ್ ದೇವಾಲಯದ ಬಳಿ ಕಂಡುಬಂದಿದೆ. ಎರಡೂ ಪತ್ರಗಳನ್ನು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಟ್ರಸ್ಟಿಗಳು ಎರಡೂ ಪತ್ರಗಳನ್ನು ನಿಪ್ಪಾಣಿ ನಗರ ಪೊಲೀಸರಿಗೆ ಸಲ್ಲಿಸಿ ದೂರು ದಾಖಲಿಸಿದ್ದಾರೆ.

2. ಮಾರ್ಚ 9ರಂದು ಚಿಕ್ಕೋಡಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಗೌಡರ್ ಇವರು ದೇವಸ್ಥಾನದ ಧರ್ಮದರ್ಶಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪೊಲೀಸ್ ಆಡಳಿತ ಮಂಡಳಿ ದೇವಸ್ಥಾನದ ಜಾಗವನ್ನು ಪರಿಶೀಲನೆ ನಡೆಸಿ ‘ದೇವಸ್ಥಾನದ ಸುತ್ತ ರಕ್ಷಣಾ ಗೋಡೆ ನಿರ್ಮಿಸಿ’, ‘ದೇವಸ್ಥಾನಕ್ಕೆ ಕನಿಷ್ಠ 2 ನೌಕರರನ್ನಾದರೂ ಕಾಯಂ ನೇಮಿಸಬೇಕು’, ‘ದೇವಸ್ಥಾನದ ಮುಂಭಾಗದ ಒತ್ತುವರಿ ತೆರವು ಮಾಡಿ’ ಇತ್ಯಾದಿ ಸೂಚನೆಗಳನ್ನು ನೀಡಿದ್ದಾರೆ. (ಈ ಸೂಚನೆಗಳು ಸರಿಯಾಗಿರಬಹುದು; ಆದರೆ ಅವರಿಗೆ ನೀಡುವ ಮೂಲಕ ಪೊಲೀಸರು ದೇವಾಲಯದ ರಕ್ಷಣೆಯ ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ, ಅದು ಅಷ್ಟೇ ಸತ್ಯ ! – ಸಂಪಾದಕರು)

3. ಮಾರ್ಚ್ 9 ರಂದು ರಾಜ್ಯದ ಎಲ್ಲಾ ದೇವಾಲಯಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರದೇಶದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಮೀಸಲು ಪಡೆಗಳ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ.