ಝಾರಖಂಡನಲ್ಲಿ ಸ್ಪೇನ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ 

ದುಮಕಾ (ಝಾರಖಂಡ) – ಇಲ್ಲಿ ಸ್ಪೇನ ದೇಶದ ಓರ್ವ 30 ವರ್ಷದ ಮಹಿಳೆಯ ಮೇಲೆ 7-8 ಜನರು ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ಇಲ್ಲಿನ ಕುರಮಹಾಟ ಪ್ರದೇಶದಲ್ಲಿ ಮಾರ್ಚ್ 1 ರ ರಾತ್ರಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು 4 ಜನರನ್ನು ವಶಕ್ಕೆ ಪಡೆದು ಅವರ ತನಿಖೆ ಆರಂಭಿಸಿದ್ದಾರೆ. ಈ ಮಹಿಳೆ ತನ್ನ ಪತಿಯೊಂದಿಗೆ ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದಾಳೆ. ಈ ದಂಪತಿಗಳು ಮೊದಲು ಪಾಕಿಸ್ತಾನಕ್ಕೆ ಹೋಗಿದ್ದರು, ಅಲ್ಲಿಂದ ಬಾಂಗ್ಲಾದೇಶದ ಮೂಲಕ ಝಾರಖಂಡ್ ನ ದುಮಕಾ ತಲುಪಿದ್ದರು.

1. ಪ್ರವಾಸಿಗರಾಗಿ ಇಲ್ಲಿ ತಿರುಗಾಡುತ್ತಿರುವಾಗ ರಾತ್ರಿಯಾದಾಗ ಈ ಮಹಿಳೆ ಕುರಮಾಹಾಟ ಪ್ರದೇಶದ ಒಂದು ಹೊಲದ ಟೆಂಟ್ ನಲ್ಲಿ ತನ್ನ ಪತಿಯೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಳು. ಆ ಸಮಯದಲ್ಲಿ ಈ ಘಟನೆ ನಡೆಯಿತು. ಆಕೆ ಪ್ರತಿಭಟಿಸಿದಾಗ ಆಕೆ ಮತ್ತು ಆಕೆಯ ಪತಿಯನ್ನು ಥಳಿಸಿದ್ದಾರೆ. ಪೊಲೀಸರು ಮಹಿಳೆಯನ್ನು ತಡರಾತ್ರಿ ಸರೈಯಾಹಾಟ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಪರೀಕ್ಷೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವುದು ದೃಢಪಟ್ಟಿದೆ.

2. ಭಾಜಪ ಸಂಸದ ನಿಶಿಕಾಂತ ದುಬೆ ಇವರು ಈ ಪ್ರಕರಣದ ಮೇಲೆ ರಾಜ್ಯದ ಝಾರಖಂಡ ಮುಕ್ತಿ ಮೋರ್ಚಾ ಸರಕಾರವನ್ನು ಟೀಕಿಸಿದರು. ಅವರು ಮಾತನಾಡಿ ಸರಕಾರವು ಕಳೆದ 4 ವರ್ಷಗಳಲ್ಲಿ ಯಾವುದೇ ತರಬೇತಿಯಿಲ್ಲದೆ ಇಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ, ಕೊಲೆ, ದರೋಡೆ ಮತ್ತು ಬಲಾತ್ಕಾರಗಳಿಗೆ ಪ್ರೋತ್ಸಾಹ ನೀಡಿದೆ ಎಂದರು. ಬುಡಕಟ್ಟು ಜನಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಇಲ್ಲಿನ ಸಂಪೂರ್ಣ ಪೊಲೀಸ್ ಆಡಳಿತ ತಕ್ಷಣವೇ ಬದಲಾಯಿಸಿ ಈ ಪೊಲೀಸ ಸಿಬ್ಬಂದಿಗಳನ್ನೇ ಕಾರಾಗೃಹಕ್ಕೆ ಕಳುಹಿಸಬೇಕು, ಎಂದೂ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತೀಯರಷ್ಟೇ ಅಲ್ಲ ವಿದೇಶಿ ಮಹಿಳೆಯರ ಮೇಲೆಯೂ ಭಾರತದಲ್ಲಿ ಬಲಾತ್ಕಾರಗಳಾಗುತ್ತಿದೆ. ಇದು ಭಾರತಕ್ಕೆ ನಾಚಿಕೆಗೇಡಿನ ವಿಷಯ! ಈಗಲಾದರೂ ಎಲ್ಲ ಪಕ್ಷಗಳ ಆಡಳಿತ ನಡೆಸುವವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ.