|
ಜಯಪೂರ – ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ‘ವಿಐಪಿ’ ಸಂಸ್ಕೃತಿಯನ್ನು ಕೊನೆಗಾಣಿಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಪ್ರಯಾಣಿಸುತ್ತಿರುವಾಗ ಅವರ ಕಾರು ಮತ್ತು ಬೆಂಗಾವಲು ವಾಹನಗಳ ಗುಂಪು ಸಾಮಾನ್ಯರಂತೆ ‘ಟ್ರಾಫಿಕ್ ಸಿಗ್ನಲ್’ಗಳನ್ನು ಪಾಲಿಸಲಿದೆ. ವಾಹನ ದಟ್ಟಣೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಸ್ಥಾನದಲ್ಲಿ ‘ವಿಐಪಿ’ ಸಂಸ್ಕೃತಿಯನ್ನು ಕೊನೆಗಾಣಿಸುವ ದಿಸೆಯಲ್ಲಿ ಈ ನಿರ್ಣಯ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಲಾಗುತ್ತಿದೆ.
1. ಮುಖ್ಯಮಂತ್ರಿಗಳ ವಾಹನಗಳ ಬೆಂಗಾವಲು ವಾಹನಗಳು ಹೋಗುತ್ತಿರುವಾಗ ಮಾರ್ಗದಲ್ಲಿ ರೆಡ್ ಸಿಗ್ನಲ್ ಸಿಕ್ಕ ತಕ್ಷಣ ಮುಖ್ಯಮಂತ್ರಿಗಳ ವಾಹನಗಳು ನಿಲ್ಲಲಿದೆ ಎಂದು ಭಜನ್ ಲಾಲ್ ಶರ್ಮಾ ಮಾಹಿತಿ ನೀಡಿದರು.
2. ಅತಿಗಣ್ಯ ವ್ಯಕ್ತಿಗಳ ರಸ್ತೆ ಸಂಚಾರದ ವೇಳೆ ಮೇಲಿಂದ ಮೇಲೆ ಆಗುವ ವಾಹನ ದಟ್ಟಣೆಯಿಂದ ಜನ ಸಾರ್ವಜನಿಕರಿಗೆ ಸಮಾಧಾನ ನೀಡಲು ಹಾಗೂ ಈ ದಟ್ಟಣೆಯಲ್ಲಿ ರೋಗಿಗಳಿಗೆ ಆಗುವ ತೊಂದರೆಯಿಂದ ಅವರನ್ನು ಪಾರು ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ತಿಳಿಸಿದ್ದಾರೆ.
3. ಮುಖ್ಯಮಂತ್ರಿಗಳು ಫೆಬ್ರವರಿ 21 ರಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ ಯು.ಆರ್. ಸಾಹು ಇವರಿಗೆ ಈ ನಿರ್ಧಾರದ ಬಗ್ಗೆ ಸೂಚನೆ ನೀಡಿದ್ದಾರೆ.
(ಸೌಜನ್ಯ – Amar Ujala Rajasthan)
ವಾಹನ ದಟ್ಟಣೆಯಿಂದ ಜನಸಾಮಾನ್ಯರಿಗೆ ಸಮಾಧಾನ!
ಪೊಲೀಸ್ ಮಹಾನಿರ್ದೇಶಕ ಯು.ಆರ್. ಸಾಹು ಇವರು ಮಾತನಾಡಿ, ಮುಖ್ಯಮಂತ್ರಿಗಳಿಗೆ ನೀಡುವ ಭದ್ರತಾ ರಕ್ಷಣೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. `ವಿಐಪಿ’ಗಳು ಪ್ರಯಾಣಿಸುವಾಗ ಜನಸಾಮಾನ್ಯ ನಾಗರಿಕರು ಮತ್ತು ರೋಗಿಗಳಿಗೆ ಆಗುವ ವಾಹನ ದಟ್ಟಣೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವ್ಯವಸ್ಥೆಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.