ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವ !
ವೇದ ಪರಂಪರೆಯ ರಕ್ಷಕರು, ವಿಶ್ವದಾದ್ಯಂತ ಭಗವದ್ಗೀತೆಯ ಪ್ರಸಾರ ಮಾಡಿದ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಕೋಶಾಧ್ಯಕ್ಷರಾದ ಪ.ಪೂ. ಗೋವಿಂದದೇವ ಗಿರಿ ಮಹಾರಾಜ ಇವರ ಅಮೃತ ಮಹೋತ್ಸವದ ಪ್ರಯುಕ್ತ ಮಹಾರಾಷ್ಟ್ರದ ಮುಖ್ಯಮಂತ್ರಿ ಮಾ. ಶ್ರೀ. ಏಕನಾಥ ಶಿಂದೆ ಇವರು ಪ .ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರನ್ನು ಸತ್ಕಾರ ಮಾಡಿದರು. ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ, ಶಿವಾಜಿ ಪಾರ್ಕ್, ದಾದರ್, ಮುಂಬಯಿಯಲ್ಲಿ ಅಮೃತ ಮಹೋತ್ಸವ ಸತ್ಕಾರ ಸಮಾರಂಭದ ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಪ.ಪೂ. ಸ್ವಾಮೀಜಿ ಅವರ ನಿರರ್ಗಳ ವಾಣಿಯ ಮಾರ್ಗದರ್ಶನದಿಂದ ಉಪಸ್ಥಿತರು ರಾಷ್ಟ್ರ ಮತ್ತು ಧರ್ಮಭಿಮಾನದ ಶಕ್ತಿ ಮತ್ತು ಪ್ರೇರಣೆ ಪಡೆದುಕೊಂಡರು.
ಈ ಸಮಯದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯದ ಶೈಕ್ಷಣಿಕ ಸಚಿವ ಹಾಗೂ ಮುಂಬಯಿ ನಗರದ ಉಸ್ತುವಾರಿ ಸಚಿವರಾದ ಶ್ರೀ. ದೀಪಕ ಕೆಸರಕರ, ವಿಧಾನ ಪರಿಷತ್ ಉಪಸಭಾಪತಿ ಡಾ. ನೀಲಮ ಗೋರ್ಹೆ, ಶಿವಸೇನೆಯ ಸಂಸದ ಶ್ರೀ. ಭರತಶೇಠ ಗೊಗಾವಲೆ, ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ ಮತ್ತು ಸುದರ್ಶನ ನ್ಯೂಸ್ ನ ಮುಖ್ಯ ಸಂಪಾದಕರಾದ ಶ್ರೀ. ಸುರೇಶ ಚೌಹಾಣಕೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸುದರ್ಶನ ನ್ಯೂಸ್ ನ ಮುಖ್ಯ ಸಂಪಾದಕರಾದ ಶ್ರೀ. ಸುರೇಶ ಚೌಹಾಣಕೆ ಇವರು ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಸಂದರ್ಶನ ನಡೆಸಿದರು. ಈ ಸಮಯದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಬರೆದಿರುವ ‘ಮೇಕ್ ಶುವರ್ ಗಾಂಧಿ ಇಜ್ ಡೆಡ್’ ಈ ಪುಸ್ತಕದ ಪ್ರಕಾಶನ ನಡೆಯಿತು.
ಪ. ಪೂ. ಸ್ವಾಮೀಜಿಯವರ ತಪಸ್ವಿ ಜೀವನ ಸುಡುವ ಬಿಸಿಲಲ್ಲಿ ವಟವೃಕ್ಷದ ನೆರಳು ನೀಡುವಂಥದ್ದು ! – ಏಕನಾಥ ಶಿಂದೆ, ಮಾನ್ಯ ಮುಖ್ಯಮಂತ್ರಿಗಳು, ಮಹಾರಾಷ್ಟ್ರ
ಪ. ಪೂ. ಸ್ವಾಮೀಜಿಯವರು ಧರ್ಮಕ್ಕಾಗಿ ಮಾಡಿದ ಕಾರ್ಯವೆಂದರೆ ಸುಡುಬಿಸಿಲಲ್ಲಿ ವಟವೃಕ್ಷದ ನೆರಳು ನೀಡುವಂಥದ್ದಾಗಿದೆ. ಸ್ಪರ್ಧೆಯ ಈ ಯುಗದಲ್ಲಿ ಸಂತರ ಮಾರ್ಗದರ್ಶನವೇ ಎಲ್ಲರಿಗೂ ಆಧಾರವೆನಿಸುತ್ತದೆ. ಸಂತರ ಮಾರ್ಗದರ್ಶನದಿಂದ ನಾವು ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ. ಸ್ವಾಮೀಜಿಯವರ ನಿರಂತರ ಕಾರ್ಯ ಮತ್ತು ಮಾರ್ಗದರ್ಶನದಿಂದ ಸಮಾಜಕ್ಕೆ ಲಾಭವಾಗುತ್ತಿದೆ. ಪ. ಪೂ. ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ್ ಇವರು 75 ವರ್ಷ ಅಖಂಡ ಯಜ್ಞಕುಂಡ ಪ್ರಜ್ವಲಿಸಿದ್ದಾರೆ. ಸ್ವಾರ್ಥಕ್ಕಾಗಿ ಎಲ್ಲರೂ ಬದುಕುತ್ತಾರೆ ಆದರೆ ಸ್ವಾಮೀಜಿಯಂತಹ ವ್ಯಕ್ತಿಗಳು ದೇಶಕ್ಕಾಗಿ ಕಾರ್ಯ ಮಾಡುತ್ತಾರೆ, ಇದು ನಮ್ಮ ಸೌಭಾಗ್ಯವೇ ಆಗಿದೆ. ನಮ್ಮ ಪ್ರಾಚೀನ ಸಂಸ್ಕೃತಿ, ದೇವಸ್ಥಾನಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿರುವ ಕೋಟೆ ದುರ್ಗಗಳ ರಕ್ಷಣೆ ಮಾಡುವುದಕ್ಕಾಗಿ ನಾನು ಸ್ವತಃ ಪ್ರಯತ್ನಶೀಲನಾಗಿದ್ದೇನೆ, ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ. ಏಕನಾಥ ಶಿಂದೆ ಪ್ರತಿಪಾದಿಸಿದರು.
ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ವಿಚಾರಧಾರೆ ದೇಶವನ್ನು ರಕ್ಷಿಸುವುದು ! – ಪ. ಪೂ. ಗೋವಿಂದದೇವ ಗಿರಿ ಮಹಾರಾಜ
ನನ್ನ ವಿಚಾರಗಳು ಸ್ವಾತಂತ್ರ್ಯವೀರ ಸಾವರ್ಕರ್ ಮತ್ತು ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದ್ದರಿಂದ ಅದು ಶ್ರೀರಾಮ ಮಂದಿರದವರೆಗೆ ತಲುಪಲು ಸಾಧ್ಯವಾಯಿತು. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ಇವರ ವಿಚಾರಧಾರೆ ದೇಶವನ್ನು ರಕ್ಷಿಸುವುದು. ಅನೇಕ ತಲೆಮಾರಿನ ನಂತರ ಶ್ರೀರಾಮಮಂದಿರ ನಿರ್ಮಾಣವಾಯಿತು. ಈಗ ಇದೇ ತಲೆಮಾರಿಗೆ ನಮ್ಮ ರಾಷ್ಟ್ರ ನಿರ್ಮಾಣವಾಗುತ್ತಿರುವುದನ್ನು ನಾವು ಅನುಭವಿಸೋಣ ಎಂದರು.
ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಅಧ್ಯಾತ್ಮವು ಸಮಷ್ಟಿಗಾಗಿ ! – ರಣಜಿತ ಸಾವರ್ಕರ್, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ
ಆಧ್ಯಾತ್ಮದ ಮುಖ್ಯ ಧ್ಯೇಯವು ಮೋಕ್ಷವಾಗಿರುತ್ತದೆ; ಆದರೆ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಅಧ್ಯಾತ್ಮ ಸಮಷ್ಟಿಗಾಗಿ ಇದೆ. ನೀವು ಸಂನ್ಯಾಸ ದೀಕ್ಷೆ ಪಡೆದರೂ ರಾಷ್ಟ್ರ ಕಾರ್ಯವನ್ನೂ ಮಾಡುತ್ತಿದ್ದೀರಿ. ರಾಷ್ಟ್ರಕ್ಕಾಗಿ ನೀವು ಮಾಡಿರುವ ಎಲ್ಲಕ್ಕಿಂತ ದೊಡ್ಡ ಕಾರ್ಯವೆಂದರೆ ಶ್ರೀರಾಮ ಮಂದಿರ; ಏಕೆಂದರೆ ಶ್ರೀರಾಮ ನಮ್ಮ ರಾಷ್ಟ್ರದ ಪ್ರಾಣವಾಗಿದ್ದಾರೆ. ವೀರ ಸಾವರ್ಕರರು ‘ನಾವು ರಾಮನನ್ನು ಮರೆತರೆ, ನಮ್ಮ ದೇಶದ ಪ್ರಾಣ ಹೋಗುವುದು’ ಎಂದಿದ್ದರು. ರಾಮ ಜನ್ಮಭೂಮಿಯ ಘೋಷಣೆಯಾದಾಗ ಸ್ವಾಮೀಜಿಯವರ ಮೇಲೆ ಕೋಶಾಧ್ಯಕ್ಷತೆಯ ಜವಾಬ್ದಾರಿ ಬಂತು. ಈ ಜವಾಬ್ದಾರಿಯನ್ನು ನೀವು ಅತ್ಯಂತ ಪಾರದರ್ಶಕವಾಗಿ ಮತ್ತು ಸಮಯಬದ್ಧವಾಗಿ ನಿಭಾಯಿಸಿ ರಾಮಮಂದಿರದ ನಿರ್ಮಾಣ ಮಾಡಿದ್ದೀರಿ ಎಂದು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಇವರು ಪ್ರತಿಪಾದಿಸಿದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರನ್ನು ‘ರಾಷ್ಟ್ರಯೋಗಿ ಸಂತರು’ ಎಂದು ಸಂಬೋಧಿಸಿದರು. ಧರ್ಮ ಮತ್ತು ಅಧ್ಯಾತ್ಮದೊಂದಿಗೆ ರಾಷ್ಟ್ರದ ಕುರಿತು ಮಹತ್ವದ ವಿಚಾರಧನ ಸ್ವಾಮೀಜಿಯವರು ನೀಡುತ್ತಿದ್ದಾರೆ. ಭಾರತದಲ್ಲಿನ ಎಲ್ಲಾ ಹಿಂದುತ್ವನಿಷ್ಠರಿಗಾಗಿ ಅವರು ಪಿತೃಸಮಾನವಾಗಿದ್ದಾರೆ. ಆದರ್ಶ ರಾಜ್ಯದ ಎಂದರೆ ರಾಮಲಲ್ಲನಿಗಾಗಿ ಸ್ವಾಮೀಜಿಯವರ ಮಾಧ್ಯಮದಿಂದ ‘ಕೋಶಾಧ್ಯಕ್ಷ’ರೂ ‘ಆದರ್ಶ’ರಾಗಿ ದೊರಕಿದ್ದಾರೆ ಎಂದರು. ಸ್ವಾಮೀಜಿಯವರ ಜೀವನದ ಆದರ್ಶ ಪಡೆದು ಧರ್ಮ ಮತ್ತು ದೇವಸ್ಥಾನ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ಹಿಂದೂಗಳು ಮುಂದೆ ಬರಬೇಕು ಎಂದರು.
ಕೊರೋನಾದ ಸಮಯದಲ್ಲಿ ಗೀತೆಯ ಕುರಿತು, ಅಧ್ಯಾತ್ಮದ ಕುರಿತು, ನೂರಾರು ಆನ್ಲೈನ್ ಪ್ರವಚನಗಳನ್ನು ನೀಡಿ ಸ್ವಾಮೀಜಿಯವರು 100 ಕ್ಕಿಂತಲೂ ಹೆಚ್ಚಿನ ದೇಶಗಳ ಜನರಿಗೆ ಧೈರ್ಯ ನೀಡಿದ್ದಾರೆ. ಆಶೀರ್ವಾದ ನೀಡಿದ್ದಾರೆ. ಅವರ ಈ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ. ಎಲ್ಲಾ ಧಾರ್ಮಿಕ ವಿಚಾರ ತಿಳಿದು ಅದರಿಂದ ಅನುಭೂತಿ ನೀಡುವ ಕಾರ್ಯ ನೀವು ಮಾಡುತ್ತಿರುವಿರಿ, ಎಂದು ವಿಧಾನ ಪರಿಷತ್ತಿನ ಉಪಸಭಾಪತಿ ನೀಲಮ ಗೊರ್ಹೆ ಇವರು ಉದ್ಗರಿಸಿದರು. ಶಿವಸೇನೆಯ ಶಾಸಕ ಶ್ರೀ. ರಾಹುಲ ಶೇವಾಳೆ, ಭಾಜಪದ ಮುಂಬೈ ಪ್ರದೇಶಾಧ್ಯಕ್ಷ ಸಂಸದ ಶ್ರೀ. ಅಶೀಷ ಶೆಲಾರ ಭಾಜಪದ ವಕ್ತಾರ ಹಾಗೂ ಸಂಸದ ಶ್ರೀ. ಅತುಲ ಬಾತಖಳಕರ ಇವರೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ರಾಷ್ಟ್ರಗೀತೆ ಮತ್ತು ‘ಜಯ ಜಯ ಮಹಾರಾಷ್ಟ್ರ ಮಾಝಾ —-’ ಈ ರಾಜ್ಯ ಗೀತೆಯಿಂದ ಕಾರ್ಯಕ್ರಮ ಆರಂಭವಾಯಿತು. ಅದರ ನಂತರ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಸಂಗೀತ ವಿಭಾಗದ ವಿದ್ಯಾರ್ಥಿನಿ ‘ಸಕಲ ಜಗಾ ಮಧೇ ಛಾನ್, ಅಮಚೆ ಪ್ರಿಯಕರ ಹಿಂದುಸ್ತಾನ್ —–’ ಈ ಗೀತೆ ಪ್ರಸ್ತುತಪಡಿಸಿದರು. ಅದರ ನಂತರ ಗಣ್ಯರಿಂದ ದೀಪ ಪ್ರಜ್ವಲನೆ ನಡೆಯಿತು, ಹಾಗೂ ಸಂತರ ಸತ್ಕಾರ ಮತ್ತು ಗಣ್ಯರ ಸತ್ಕಾರ ಮಾಡಲಾಯಿತು. ಕಾರ್ಯಕ್ರಮದ ಕೊನೆಗೆ ಅಗ್ನಿ ಫೌಂಡೇಶನ್ ನ ಜಾಲತಾಣ, ಲೋಗೋ ಮತ್ತು ಆ್ಯಪ್ ಅನಾವರಣ ಗೊಳಿಸಲಾಯಿತು. ‘ವಂದೇ ಮಾತರಮ್’ ನಿಂದ ಕಾರ್ಯಕ್ರಮದ ಮುಕ್ತಾಯವಾಯಿತು. ಈ ಅಮೃತ ಮಹೋತ್ಸವ ಸತ್ಕಾರ ಸಮಾರಂಭಕ್ಕೆ ವಿವಿಧ ಕ್ಷೇತ್ರದ ಗಣ್ಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಉಪಸ್ಥಿತರಿದ್ದರು.