ಸಂಘಟಿತರಾಗಿ ಹೋರಾಡಿದರೆ ದೇವಸ್ಥಾನಗಳನ್ನು ಸರಕಾರದ ಮುಷ್ಠಿಯಿಂದ ಹೊರತರಲು ಸಾಧ್ಯ ! – ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು, ಶ್ರೀ ಶೀರೂರು ಮಠ, ಉಡುಪಿ

ಉಡುಪಿ ಜಿಲ್ಲಾದ್ಯಂತ 100 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ದೇವಸ್ಥಾನ ವಿಶ್ವಸ್ಥರ ನಿರ್ಧಾರ !

ಉದ್ಘಾಟನೆ ಮಾಡುತ್ತಿರುವ (ಎಡದಿಂದ) ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಮೇಶ ಕಾರ್ಣಿಕ್, ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು, ಶ್ರೀ ಶೀರೂರು ಮಠ, ಉಡುಪಿ ಹಾಗೂ ಶ್ರೀ. ಮೋಹನ್ ಗೌಡ.

ಉಡುಪಿ : ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಪೂಜೆ ಇತ್ಯಾದಿಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರಿಕೊರಣಕ್ಕೊಳಗಾಗಲು ಬಿಡಬಾರದು. ಎಲ್ಲರೂ ಒಟ್ಟಾದರೆ ದೇವಸ್ಥಾನವನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ಸಾಧ್ಯ ಎಂದು ಉಡುಪಿ ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಕರೆ ನೀಡಿದರು. ಅವರು ಫೆಬ್ರವರಿ 11 ರಂದು ನಗರದ ಕಿದಿಯೂರು ಹೋಟೆಲಿನ ಮಾಧವ ಕೃಷ್ಣ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಅವರು ದೇವಸ್ಥಾನದ ರಕ್ಷಣೆ ಕಾರ್ಯ ಮಾಡುವ ಈ ಮಹಾಸಂಘದ ಕಾರ್ಯಕ್ಕೆ ಪರಮಾತ್ಮನು ಶಕ್ತಿ ನೀಡಲಿ ಎಂದು ಕೊನೆಯಲ್ಲಿ ಪ್ರಾರ್ಥಿಸಿದರು. ಈ ಪರಿಷತ್ತಿನಲ್ಲಿ ಸುಮಾರು 160 ಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪರಿಷತ್ತನ್ನು ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಉಡುಪಿ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು

ಈ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಉಡುಪಿ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು, ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಭಾರತೀಯ ವಾಯುಸೇನೆಯ ನಿವೃತ್ತ ಸೈನ್ಯಾಧಿಕಾರಿಗಳಾದ ಶ್ರೀ. ರಮೇಶ ಕಾರ್ಣಿಕ್ ಹಾಗೂ ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಢವಾಗಿರುತ್ತದೆ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವತೆಗಳು ವಾಸ ಮಾಡುವ ಚೈತನ್ಯಮಯ ಕ್ಷೇತ್ರವಾಗಿದೆ. ದೇವಸ್ಥಾನಗಳು ನಮ್ಮ ಧರ್ಮದ ಪ್ರಾಣವಾಗಿದೆ ಮತ್ತು ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ಹಾಗಾಗಿ ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಢವಾಗಿರುತ್ತದೆ. ಅದಕ್ಕಾಗಿ ದೇವಸ್ಥಾನಗಳ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಬೇಕಿದೆ. ಸಂಘಟಿತರಾಗಿ ಹೋರಾಡಿದರೆ ಯಶಸ್ಸು ಖಂಡಿತ ಎಂಬುದು ರಾಮಮಂದಿರ ನಿರ್ಮಾಣದಿಂದ ಸಾಬೀತಾಗಿದೆ ಎಂದರು.

ದೇವಸ್ಥಾನದ ಮೂಲಕ ಧರ್ಮರಕ್ಷಣೆ ರಾಷ್ಟ್ರರಕ್ಷಣೆ ಹಾಗೂ ಹಿಂದೂ ಸಮಾಜದ ಸರ್ವತೋಮುಖ ರಕ್ಷಣೆಯಾಗಬೇಕು ! – ಶ್ರೀ. ಮೋಹನ ಗೌಡ

‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ

ಕರ್ನಾಟಕದಲ್ಲಿ 34,೦00 ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿದೆ. ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿ ಇದೆ. ಈ ದೇವಸ್ಥಾನಗಳನ್ನು ಸರಕಾರದ ಮುಷ್ಟಿಯಿಂದ ಹೊರತರಲು ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಿದೆ, ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾರ್ಯಕ್ಕೆ ಮುಂದಾಗಿದ್ದು ಅದರಲ್ಲಿ ತಾವೆಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು.

ದೇಶ ರಕ್ಷಣೆಯೊಂದಿಗೆ ಸನಾತನ ಧರ್ಮದ ರಕ್ಷಣೆ, ಸಂಸ್ಕೃತಿ ರಕ್ಷಣೆ ಅತ್ಯಂತ ಮಹತ್ವದ್ದು ! – ಶ್ರೀ. ರಮೇಶ ಕಾರ್ಣಿಕ್, ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೆರ್ವಾಸೆ ಮತ್ತು ನಿವೃತ್ತ ಸೈನ್ಯಾಧಿಕಾರಿಗಳು

ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಭಾರತೀಯ ವಾಯುಸೇನೆಯ ನಿವೃತ್ತ ಸೈನ್ಯಾಧಿಕಾರಿಗಳಾದ ಶ್ರೀ. ರಮೇಶ ಕಾರ್ಣಿಕರ್ಣಿ

ದೇಶ ರಕ್ಷಣೆ ಎಂದರೆ ಕೇವಲ ಭೂಮಿ ರಕ್ಷಣೆ ಮಾತ್ರವಲ್ಲ. ದೇಶದ ರಕ್ಷಣೆ ಒಟ್ಟಿಗೇ ನಮ್ಮ ಸಂಸ್ಕೃತಿಯ ರಕ್ಷಣೆ, ಸನಾತನ ಧರ್ಮದ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ದೇವಸ್ಥಾನವೆಂದರೆ ನಮ್ಮ ಸಂಸ್ಕೃತಿಯನ್ನು, ಸಮಾಜದ ಒಗ್ಗಟ್ಟನ್ನು ರಕ್ಷಣೆ ಮಾಡುವ ಸ್ಥಾನವಾಗಿದೆ. ಸನಾತನ ಸಂಸ್ಕೃತಿಯನ್ನು ಉಳಿಸಬೇಕಾದರೆ ನಮ್ಮ ದೇವಸ್ಥಾನಗಳ ಸಂಪೂರ್ಣ ಅಭಿವೃದ್ದಿ ಆಗಬೇಕು, ಅದಕ್ಕಾಗಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.

ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ. ಉಮೇಶ ಪೈ, ಶ್ರೀ ವಿದ್ಯಾವಂತ ಆಚಾರ್ಯ ಮತ್ತಿತರ ದೇವಸ್ಥಾನ ವಿಶ್ವಸ್ಥರು ಮಾತನಾಡಿದರು. ನಂತರ ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ನುರಿತ ವಕೀಲರು ಕಾನೂನು ಸಲಹೆಗಳನ್ನು ನೀಡಿದರು. ಮಧ್ಯಾಹ್ನದ ನಂತರ ಮುಂದಿನ ಕಾರ್ಯಯೋಜನೆ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ಗುಂಪು ಚರ್ಚೆಯಲ್ಲಿ ಜಿಲ್ಲಾದ್ಯಂತ 100 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದು, ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ವರ್ಗ ಪ್ರಾರಂಭಿಸುವುದು ಇತ್ಯಾದಿ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಪರಿಷತ್ತಿನ ಕೊನೆಯಲ್ಲಿ ಎಲ್ಲ ದೇವಸ್ಥಾನ ವಿಶ್ವಸ್ಥರು ಕೆಲವು ಠರಾವುಗಳಿಗೆ ಅನುಮೋದನೆ ನೀಡಿದರು, ಈ ಠರಾವಿನ ಪ್ರತಿಯನ್ನು ಜೊತೆಗೆ ಕಳಿಸುತ್ತಿದ್ದೇವೆ.