ಕುಟುಂಬ ರಾಜಕಾರಣದಿಂದ ದೇಶದ ಹಾನಿ ! – ಪ್ರಧಾನಿ ನರೇಂದ್ರ ಮೋದಿ

  • ನಾಸಿಕ್‌ನಲ್ಲಿ 27 ನೇ ‘ರಾಷ್ಟ್ರೀಯ ಯುವ ಉತ್ಸವ’ವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ !

  • ಯುವಕರು ರಾಜಕೀಯಕ್ಕೆ ಬಂದು ದೇಶದ ಅಭಿವೃದ್ಧಿಗೆ ಹೆಗಲು ಕೊಡುವಂತೆ ಮನವಿ !

ನಾಸಿಕ್ – ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುವುದು ಯುವಜನರ ಜವಾಬ್ದಾರಿಯಾಗಿದೆ. ರಾಜಕೀಯದ ಮೂಲಕವೂ ದೇಶ ಸೇವೆ ಮಾಡಬಹುದು. ಪ್ರಜಾಪ್ರಭುತ್ವದಲ್ಲಿ ಯುವಕರು ಹೆಚ್ಚು ಭಾಗವಹಿಸಿದರೆ ರಾಷ್ಟ್ರದ ಭವಿಷ್ಯ ಉತ್ತಮವಾಗಿರುತ್ತದೆ. ಯುವಕರು ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕಾರಣ ಕಡಿಮೆಯಾಗುತ್ತದೆ. ಕುಟುಂಬ ರಾಜಕಾರಣದಿಂದ ದೇಶ ಸಾಕಷ್ಟು ನಷ್ಟ ಅನುಭವಿಸಿದೆ, ಯುವಕರು ರಾಜಕೀಯಕ್ಕೆ ಬಂದು ದೇಶದ ಅಭಿವೃದ್ಧಿಗೆ ಹೆಗಲು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 12ರಂದು ಇಲ್ಲಿ ಆಯೋಜಿಸಿದ್ದ 27ನೇ ‘ರಾಷ್ಟ್ರೀಯ ಯುವ ಮಹೋತ್ಸವ’ವನ್ನು ನರೇಂದ್ರ ಮೋದಿ ಉದ್ಘಾಟಿಸಿದರು. ನಾಸಿಕ್‌ನ ಪ್ರವಾಸದಲ್ಲಿರುವ ಮೋದಿ ಅವರು ಶ್ರೀ ಕಲಾರಾಮ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ನೆರೆದ ಯುವ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಮಾತನ್ನು ಮುಂದುವರೆಸುತ್ತಾ,

1. ನಾನು ವಿಶ್ವ ನಾಯಕರನ್ನು ಭೇಟಿಯಾದಾಗ, ನನಗೆ ಅವರಲ್ಲಿ ದೊಡ್ಡ ಭರವಸೆ ಕಾಣಿಸುತ್ತದೆ. ಭರವಸೆ ಮತ್ತು ಆಕಾಂಕ್ಷೆಗೆ ಒಂದು ಕಾರಣವೆಂದರೆ ಪ್ರಜಾಪ್ರಭುತ್ವ. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಹತ್ವದ ಕಾರ್ಯ ಯುವಜನರ ಹೆಗಲ ಮೇಲಿದೆ. ಅವರ ಶಕ್ತಿಯಿಂದಾಗಿ ಇಂದು ಭಾರತದ ಆರ್ಥಿಕತೆಯು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಸೇರಿದೆ. ಇಂದಿನ ಯುವ ಪೀಳಿಗೆಯಲ್ಲಿ ನನಗೆ ಅಪಾರ ನಂಬಿಕೆ ಇದೆ.

2. ಭಾರತದ ಯುವ ಪೀಳಿಗೆಯು ಆಯುರ್ವೇದದ ‘ಬ್ರಾಂಡ್ ಅಂಬಾಸಿಡರ್’ ಆಗಿದೆ. ನಿಮ್ಮ ಅಜ್ಜ-ಅಜ್ಜಿಯರನ್ನು ಕೇಳಿದರೆ, ಅವರ ಕಾಲದಲ್ಲಿ ಊಟದಲ್ಲಿ ರೊಟ್ಟಿ, ಕುಟಕಿ, ರಾಗಿ, ಜ್ವಾರಿಗಳನ್ನು ಒಳಗೊಂಡಿತ್ತು; ಆದರೆ ಗುಲಾಮ ಮನಸ್ಥಿತಿಯಲ್ಲಿ ಈ ಆಹಾರವು ಬಡತನದೊಂದಿಗೆ ಸೇರಿಸಿದರು. ಈ ಆಹಾರವನ್ನು ಅಡುಗೆಮನೆಯಿಂದ ಹೊರತೆಗೆಯಲಾಯಿತು. ಅದೇ ಆಹಾರವು ಈಗ ‘ಮಿಲೆಟ್ಸ್ ಮತ್ತು ಸೂಪರ್‌ಫುಡ್‌ಗಳ’ ರೂಪದಲ್ಲಿ ಮತ್ತೆ ಅಡುಗೆಮನೆಗೆ ಕಾಲಿಡುತ್ತಿದೆ. ಸರಕಾರ ಈ ಮಿಲೆಟ್ಸ್ ಗಳಿಗೆ ‘ಶ್ರೀ ಅನ್ನ’ ಎಂಬ ಹೊಸ ಗುರುತನ್ನು ನೀಡಿದೆ. ನಿಮಗೆ ‘ಶ್ರೀ ಅನ್ನ’ದ ‘ಬ್ರಾಂಡ್ ಅಂಬಾಸಿಡರ್’ ಆಗಬೇಕಿದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಶದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.

3. ಸಹಕಾರವು ಪ್ರಜಾಪ್ರಭುತ್ವದ ಮತ್ತೊಂದು ಪ್ರಮುಖ ರೂಪವಾಗಿದೆ. ನೀವು ಮತದಾನದ ಮೂಲಕ ನಿಮ್ಮ ಮತವನ್ನು ಚಲಾಯಿಸಬೇಕು. ಮತದಾನ ಮಾಡುವ ಮತದಾರರು ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ ತರಬಹುದು. ಇಂದು ಭಾರತದ ಯುವ ಶಕ್ತಿಯದ್ದಾಗಿದೆ.

4. ಸ್ವಾಮಿ ವಿವೇಕಾನಂದರ ಜನ್ಮದಿನದಂದು ನಾಸಿಕ್‌ನಲ್ಲಿರುವುದು ನನ್ನ ಸೌಭಾಗ್ಯ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಯುವಕರ ಹೆಗಲ ಮೇಲಿದೆ. ಸರಕಾರ ಕಳೆದ 10 ವರ್ಷಗಳಲ್ಲಿ ಯುವಕರಿಗೆ ಹಲವಾರು ಅವಕಾಶಗಳನ್ನು ಕಲ್ಪಿಸಿದೆ. ಯುವಕರು ಆ ಶಕ್ತಿಯಿಂದ ದೇಶವನ್ನು ಮುನ್ನಡೆಯಬೇಕು. ಅವರು ಅದನ್ನು ಪೂರ್ಣ ಶಕ್ತಿಯಿಂದ ಮಾಡುತ್ತಾರೆ ಎಂದು ನನ್ನ ನಂಬಿಕೆ ಇದೆ.

ದೇಶಾದ್ಯಂತ ದೇವಾಲಯಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಮನವಿ !

ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ದೇಶಾದ್ಯಂತ ಜನವರಿ 22ರವರೆಗೆ ದೇವಸ್ಥಾನ, ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಬೇಕು. ಅಲ್ಲಿ ಶ್ರಮದಾನ ಮಾಡಿ. ಇಂದು ನನಗೆ ಶ್ರೀ ಕಾಳಾರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಮತ್ತು ಇಲ್ಲಿ ಶ್ರಮದಾನ ಮಾಡುವ ಅವಕಾಶವೂ ಸಿಕ್ಕಿತು ಎಂದು ಹೇಳಿದರು.