ಜನವರಿ 22 ರಂದು ಮಗು ಹುಟ್ಟಬೇಕೆಂದು, ಅಯೋಧ್ಯೆಯಲ್ಲಿರುವ ಗರ್ಭಿಣಿ ತಾಯಂದಿರಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಅರ್ಜಿ !

ನವ ದೆಹಲಿ – ಬರುವ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಇದೇ ದಿನ, ತಮ್ಮ ಮಗುವೂ ಜನಿಸಬೇಕು, ಎಂದು ಅಯೋಧ್ಯೆಯಲ್ಲಿ ಅನೇಕ ಗರ್ಭಿಣಿಯರು ಶಸ್ತ್ರಕ್ರಿಯೆ ಪ್ರಸೂತಿಗಾಗಿ (ಸಿಸೇರಿಯನ್ ಹೆರಿಗೆಗೆ) ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಮಹಿಳೆಯರು ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ‘ಇದಕ್ಕೆ ಏನು ಮಾಡಬೇಕು?’ ಎನ್ನುವ ಪ್ರಶ್ನೆ ಆಸ್ಪತ್ರೆ ಆಡಳಿತಕ್ಕೆ ಎದುರಾಗಿದೆ. ಈ ಸಂದರ್ಭದಲ್ಲಿ ‘ಇಂಡಿಯಾ ಟುಡೇ’ ಕಾನಪುರ ಸರಕಾರಿ ಆಸ್ಪತ್ರೆಯ ವಿಭಾಗದ ಮುಖ್ಯಸ್ಥರ ಸಂದರ್ಭವನ್ನು ವಿವರಿಸುತ್ತಾ ಸುದ್ದಿಯನ್ನು ನೀಡಿದೆ.

1. ವಿಭಾಗದ ಮುಖ್ಯಸ್ಥೆ ಡಾ.ಸೀಮಾ ದ್ವಿವೇದಿ ಮಾತನಾಡಿ, ನಮಗೆ ಪ್ರತಿದಿನ 14 ರಿಂದ 15 ದಂಪತಿಗಳಿಂದ ‘ಜನವರಿ 22ರಂದು ಹೆರಿಗೆ ಮಾಡಿಸಿರಿ’ ಎಂದು ಅರ್ಜಿಗಳು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಅಂದು ಅವರಿಗೆ ಸಾಮಾನ್ಯ ಹೆರಿಗೆ ಮಾಡಿಸುವುದು ಸಂಪೂರ್ಣವಾಗಿ ಅಸಾಧ್ಯವಾಗಿದೆ. ನಾವು ಅವರಿಗೆ ಇದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿ ಹೇಳಿದ್ದೇವೆ. ಕೆಲವು ದಂಪತಿಗಳಂತೂ ಅವರಿಗೆ ಯಾರೋ ಹೇಳಿರುವ ಶುಭ ಮುಹೂರ್ತದಲ್ಲಿಯೇ ಮಗುವಿನ ಜನನವಾಗಬೇಕು, ಎಂದು ಪಟ್ಟು ಹಿಡಿದಿದ್ದಾರೆ. ಇಂತಹ ಸಮಯದಲ್ಲಿ, ಅವಧಿಯ ಮೊದಲೇ ಹೆರಿಗೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿರ್ಲಕ್ಷಿಸಲು ಕೂಡ ಅವರು ಸಿದ್ಧರಿರುತ್ತಾರೆ. ಸಧ್ಯಕ್ಕೆ ಆಸ್ಪತ್ರೆಯು ಜನವರಿ 22 ರಂದು 35 ಶಸ್ತ್ರಚಿಕಿತ್ಸೆಗಳನ್ನು ಯೋಜಿಸಿದೆ. ನಾವು ಪ್ರತಿದಿನ 14 ರಿಂದ 15 ಶಸ್ತ್ರಕ್ರಿಯೆಗಳನ್ನು ಮಾತ್ರ ಮಾಡುತ್ತೇವೆ.

2. ಈ ಗರ್ಭಿಣಿ ಮಹಿಳೆಯರಲ್ಲಿ ಕೆಲವರು, ಶ್ರೀರಾಮಲಲ್ಲಾನ ಆಗಮನದ ದಿನದಂದೇ ತಮ್ಮ ಮಗುವಿನ ಜನನವಾಗಬೇಕು ಎಂಬುದು ಅವರ ಇಚ್ಛೆಯೆಂದು ಹೇಳಿದ್ದಾರೆ. ನಾವು ಕಳೆದ 100 ವರ್ಷಗಳಿಂದ ಶ್ರೀರಾಮ ಮಂದಿರದ ದಾರಿ ಕಾಯುತ್ತಿದ್ದೇವೆ. ನಮ್ಮ ಮಗುವಿನ ಆಗಮನಕ್ಕೆ ಇದು ಒಂದು ದೈವಿ ಯೋಗವಾಗಿದೆ ಎಂದು ಹೇಳುತ್ತಿದ್ದಾರೆ.