ದತ್ತಾತ್ರೇಯರ ಪೂರ್ಣಾವತಾರ

೧. ಶ್ರೀಪಾದ ಶ್ರೀವಲ್ಲಭ, ಪೀಠಾಪುರ, ಕುರವಪುರ

ಶ್ರೀಪಾದ ಶ್ರೀವಲ್ಲಭರು ದತ್ತಾತ್ರೇಯರ ಕಲಿಯುಗದ ಮೊದಲ ಅವತಾರವೆಂದು ೧೩ ನೇ ಶತಮಾನದಲ್ಲಿ ಜನ್ಮ ತಾಳಿದರು ಎಂದು ನಂಬಲಾಗುತ್ತದೆ. ಸಮಾಜದಲ್ಲಿನ ವಿಕೃತಿ ಇಲ್ಲವಾಗಬೇಕು, ಮೊಗಲರ ಆಕ್ರಮಣದಿಂದ ಉಪದ್ರವಕ್ಕೊಳಗಾದ ಮತ್ತು ಅವ್ಯವಸ್ಥಿತವಾಗಿರುವ ಸಮಾಜವನ್ನು ಪುನರ್ಸ್ಥಾಪಿಸಲು, ಧರ್ಮ ಮತ್ತು ಸಂಸ್ಕೃತಿಯ ವಿಕೃತಿಯನ್ನು ದೂರಗೊಳಿಸುವ, ಉದ್ದೇಶದಿಂದ ಶ್ರೀ ದತ್ತಾತ್ರೇಯರು ಈ ಅವತಾರವನ್ನು ತಾಳಿದ್ದರು. ಆ ಸಮಯದಲ್ಲಿ ಸಮಾಜವು ಅತ್ಯಂತ ದುರ್ಬಲವಾಗಿತ್ತು. ಇಂತಹ ಸಮಯದಲ್ಲಿ ಇ.ಸ. ೧೩೨೦ ರಲ್ಲಿ ಶ್ರೀ ದತ್ತಾತ್ರೇಯರು ಶ್ರೀಪಾದ ಶ್ರೀವಲ್ಲಭರ ಅವತಾರ ತಾಳಿ ಬಹಳ ದೊಡ್ಡ ಕಾರ್ಯವನ್ನು ಮಾಡಿದರು. ಶ್ರೀಪಾದ ಶ್ರೀವಲ್ಲಭರು ತಮ್ಮ ಅವತಾರ ಕಾಲದಲ್ಲಿ ಅನೇಕ ಅಗಮ್ಯ ಲೀಲೆಗಳನ್ನು ಮಾಡಿದರು. ಈ ಅವತಾರದ ನಂತರವೇ ಶ್ರೀದತ್ತ ಸಂಪ್ರದಾಯವು ಭಾರತದಲ್ಲಿ ಬಹಳ ರಭಸದಿಂದ ಬೆಳೆಯಿತು. ಶ್ರೀಪಾದ ಶ್ರೀವಲ್ಲಭರನ್ನು ನಂಬುವ ದೊಡ್ಡ ಸಂಪ್ರದಾಯ ಆಂಧ್ರಪ್ರದೇಶ ಸಹಿತ ಕರ್ನಾಟಕ ಮತ್ತು ಮಹಾರಾಷ್ಟ್ರ, ಹಾಗೆಯೇ ಸಂಪೂರ್ಣ ಭಾರತದಲ್ಲಿ ಹಬ್ಬಿದೆ. ಇದರಲ್ಲಿ ಶ್ರೀಪಾದ ಶ್ರೀವಲ್ಲಭರು ಮತ್ತು ದತ್ತಾತ್ರೇಯರೇ ಇಷ್ಟದೇವತೆಯಾಗಿದ್ದಾರೆ. ‘ಶ್ರೀಪಾದರಾಜಂ ಶರಣಂ ಪ್ರಪದ್ಯೆ’ ಇದು ಅವರ ಮುಖ್ಯ ಇಷ್ಟ ಮಂತ್ರವಾಗಿದೆ.

೨. ಶ್ರೀ ನೃಸಿಂಹ ಸರಸ್ವತಿ ಸ್ವಾಮಿ

ಇವರನ್ನು ದತ್ತಾತ್ರೇಯರ ಎರಡನೇ ಅವತಾರವೆಂದು ನಂಬಲಾಗುತ್ತದೆ. ಕಾರಂಜಾ (ಲಾಡ) ಅಕೋಲಾ ಜಿಲ್ಲೆಯ ಅಂಬಾಭವಾನಿ ಮತ್ತು ಮಾಧವ ಇವರ ಉದರದಲ್ಲಿ ಶ್ರೀ ದತ್ತಾತ್ರೇಯರ ಜನ್ಮವಾಯಿತು. ಶ್ರೀಪಾದ ಶ್ರೀವಲ್ಲಭರು ಬ್ರಹ್ಮಚಾರಿಗಳಾಗಿದ್ದರು ಮತ್ತು ನೃಸಿಂಹ ಸರಸ್ವತಿ ಇವರು ಸನ್ಯಾಸಿಗಳಾಗಿದ್ದರು. ಗುರುಚರಿತ್ರೆ ಈ ದತ್ತ ಸಂಪ್ರದಾಯದ ಪ್ರಾಸಾದಿಕ ಗ್ರಂಥದಲ್ಲಿ ಶ್ರೀ ನೃಸಿಂಹ ಸರಸ್ವತಿ ಮಹಾರಾಜರ ಜೀವನಕಾರ್ಯ ಮತ್ತು ಲೀಲೆಯನ್ನು ವರ್ಣಿಸÀಲಾಗಿದೆ. ಅದರಲ್ಲಿನ ಒಂದು ಕಥೆ ಮುಂದಿನಂತಿದೆ. ಅವರು ಹುಟ್ಟಿದ ಕೂಡಲೇ ಓಂಕಾರವನ್ನು ಉಚ್ಚರಿಸಿದರು; ನಂತರ ಅವರು ಒಂದು ಶಬ್ದವನ್ನೂ ಮಾತನಾಡುತ್ತಿರಲಿಲ್ಲ. ಇದೇ ರೀತಿ ೭ ವರ್ಷಗಳು ಕಳೆದವು. ‘ಅವರು ತಮಗೆ ಉಪನಯನ ಮಾಡಬೇಕು’, ಎಂದು ತಾಯಿ-ತಂದೆಯರಿಗೆ ಸೂಚಿಸಿದರು. ಉಪನಯನವಾದ ಕೂಡಲೇ ಅವರ ಬಾಯಿಯಿಂದ ವೇದವಾಣಿ ಬರತೊಡಗಿತು, ಆಗ ಎಲ್ಲರಿಗೂ ಈ ಬಾಲಕನು ಅವತಾರಿ ಪುರುಷನಾಗಿದ್ದಾನೆ ಎಂದು ಖಚಿತ ವಾಯಿತು. ಶ್ರೀಪಾದ ಶ್ರೀವಲ್ಲಭರ ಕಾರ್ಯವನ್ನೇ ಅವರು ಮುಂದುವರಿಸಿ ಶ್ರೀ ದತ್ತಭಕ್ತಿಯನ್ನು ವಿಸ್ತರಿಸಿದರು. ಅವರಿಗೆ ದೀರ್ಘಾಯುಷ್ಯವು ಲಭಿಸಿತು. ಸಂಪೂರ್ಣ ಭಾರತದಲ್ಲಿ ಅವರು ಸಂಚರಿಸಿದರು. ಅವರದ್ದೇ ದೊಡ್ಡ ಶಿಷ್ಯವರ್ಗವು ಸಿದ್ಧವಾಯಿತು. ಅವರ ೭ ಮುಖ್ಯ ಶಿಷ್ಯರಿದ್ದರು. ಮಾಧವ ಸರಸ್ವತಿ, ಕೃಷ್ಣ ಸರಸ್ವತಿ, ಬಾಲ ಸರಸ್ವತಿ, ಉಪೇಂದ್ರ ಸರಸ್ವತಿ, ಸದಾನಂದ ಸರಸ್ವತಿ, ಜ್ಞಾನಜ್ಯೋತಿ ಸರಸ್ವತಿ ಮತ್ತು ಸಿದ್ಧ ಸರಸ್ವತಿ. ಶ್ರೀ ದತ್ತ ಸಂಪ್ರದಾಯದಲ್ಲಿ ಇವರೆಲ್ಲರ ಬಹಳ ಪವಿತ್ರ ಸ್ಥಾನಗಳಿವೆ. ಸಾವಿರಾರು ಭಕ್ತರು ಅಲ್ಲಿ ಅನುಷ್ಠಾನಗಳನ್ನು, ಜಪ, ತಪ, ಪಾರಾಯಣಗಳನ್ನು ಮಾಡುತ್ತಾರೆ. ಅದರಿಂದ ಅವರಿಗೆ ಐಹಿಕ ಮತ್ತು ಪಾರಮಾರ್ಥಿಕ ಲಾಭವಾಗುತ್ತದೆ. ಈ ಸಂಪ್ರದಾಯ ಇಂದಿಗೂ ಅವರ ಕಾರ್ಯ ಮುಂದುವರಿಸಿದೆ.

೩. ಶ್ರೀ ಸ್ವಾಮೀ ಸಮರ್ಥ

ಅಕ್ಕಲಕೋಟ್‌ನ ಶ್ರೀ ಸ್ವಾಮೀ ಸಮರ್ಥರನ್ನು ಶ್ರೀ ದತ್ತಾತ್ರೇಯರ ಮೂರನೇ ಅವತಾರವೆಂದು ಹೇಳುತ್ತಾರೆ. ತಮ್ಮ ಅವತಾರ ಸಮಾಪ್ತಿಯ ಸಮಯದಲ್ಲಿ ಶ್ರೀ ನೃಸಿಂಹಸರಸ್ವತಿ ಇವರು ಶ್ರೀಶೈಲದಿಂದ ಕರ್ದಳಿವನಕ್ಕೆ ಹೊಗಿ ತಪಶ್ಚರ್ಯಕ್ಕೆ ಕುಳಿತರು. ಇದರಲ್ಲಿ ೩೫೦ ವರ್ಷಗಳು ಕಳೆದವು. ಅವರ ಸುತ್ತಲೂ ಹುತ್ತ ತಯಾರಾಯಿತು. ಒಮ್ಮೆ ಓರ್ವ ಮರ ಕಡಿಯುವವನು ಮರವನ್ನು ಕಡಿಯುವಾಗ ಅವನ ಪೆಟ್ಟು ತಪ್ಪಿ ಹುತ್ತದ ಮೇಲೆ ಬಿದ್ದಿತು.ಆ ಹುತ್ತದಿಂದ ಶ್ರೀ ಸ್ವಾಮಿ ಸಮರ್ಥರು ಪ್ರಕಟರಾದರು, ಎನ್ನಲಾಗುತ್ತದೆ. ಅಲ್ಲಿಂದ ಸ್ವಾಮಿಗಳು ಇಡೀ ದೇಶದಲ್ಲಿ ಎಲ್ಲೆಡೆ ಸಂಚಾರ ಮಾಡಿದರು. ವಿವಿಧ ಸ್ಥಳಗಳಲ್ಲಿ ಅವರು ಬೇರೆ ಬೇರೆ ಹೆಸರುಗಳಿಂದ ಹೆಸರುವಾಸಿಯಾಗಿದ್ದರು. ನಂತರ ಅವರು ಮಂಗಳವೇಢೆಗೆ ಬಂದರು. ಅನಂತರ ಅಕ್ಕಲಕೋಟ್‌ಗೆ ಬಂದು ಕೊನೆಯವರೆಗೆ ಅಲ್ಲಿಯೇ ಇದ್ದರು.

ಜನಸಾಮಾನ್ಯ ಭಕ್ತರನ್ನು ಅವರು ತಮ್ಮವರನ್ನಾಗಿ ಮಾಡಿ ಕೊಂಡಿದ್ದರು. ಎಲ್ಲ ಜಾತಿಪಂಗಡಗಳ, ಬಹುಜನ ಸಮಾಜದ ಮತ್ತು ಎಲ್ಲ ಧರ್ಮದ ಜನರು ಅವರ ಜೊತೆಗೆ ಸೇರಿದರು. ಅವರ ಬಾಹ್ಯ ಆಚರಣೆ ಕೆಲವೊಮ್ಮೆ ಬಾಲಕಭಾವದಂತೆ ಮತ್ತು ಕೆಲವೊಮ್ಮೆ ಅತ್ಯಂತ ಉಗ್ರವಾಗಿರುತ್ತಿತ್ತು. ಅವರು ಅನೇಕ ಜನರ ಅಹಂಕಾರವನ್ನು ದೂರ ಮಾಡಿದರು. ಅನೇಕರನ್ನು ಸನ್ಮಾರ್ಗಕ್ಕೆ ಹಚ್ಚಿದರು. ಯಾರಿಗೆ ಎಷ್ಟು ಅಧಿಕಾರವೋ ಅದಕ್ಕನುಸಾರ ಅವರವರ ಮೇಲೆ ಕೃಪೆ ಮಾಡಿದರು. ನಿರ್ಭಯ, ಸ್ಪಷ್ಟವಾಕ್ಚಾತುರ್ಯ ಮತ್ತು ಆತ್ಮೀಯತೆ ಇವು ಗಳಿಂದ ಲಕ್ಷಾಂತರ ಭಕ್ತರನ್ನು ಅವರು ತಮ್ಮವರನ್ನಾಗಿ ಮಾಡಿಕೊಂಡರು. ಅವರ ಕಾರ್ಯಾವಧಿಯಲ್ಲಿ ದೇಶದಲ್ಲಿ ಆಂಗ್ಲರ ಆಳ್ವಿಕೆ ಇತ್ತು. ಆಂಗ್ಲರ ಆಳ್ವಿಕೆಯ ಅರೆಗಲ್ಲಿನಲ್ಲಿ ಜನತೆ ಸಿಕ್ಕು ನುಚ್ಚುನೂರಾಗುತ್ತಿತ್ತು. ಅವರ ಆತ್ಮಸನ್ಮಾನವನ್ನು ಅವರು ಜಾಗೃತಗೊಳಿಸಿದರು. ಅವರ ಭಕ್ತರಲ್ಲಿ ಹಿಂದೂ ಗಳೊಂದಿಗೆ ಮುಸಲ್ಮಾನರು, ಕ್ರೈಸ್ತರು ಹೀಗೆ ಎಲ್ಲ ಜನರಿದ್ದರು. ಅವರ ಸುತ್ತಲೂ ದೊಡ್ಡ ಶಿಷ್ಯ ಪರಿವಾರ ತಯಾರಾಗಿತ್ತು. ಪ್ರತಿಯೊಬ್ಬ ಶಿಷ್ಯನ ಸಾಮರ್ಥ್ಯಕ್ಕನುಸಾರ ಅವನಿಗೆ ಕಾರ್ಯವನ್ನು ನೀಡಿದರು ಮತ್ತು ಸಂಪ್ರದಾಯದ ಪತಾಕೆಯನ್ನು ನೀಡಿದರು.ಶ್ರೀ ಸ್ವಾಮಿ ಸಮರ್ಥರ ವಿವಿಧ ಶಿಷ್ಯರ ಮೂಲಕ ಶ್ರೀ ಸ್ವಾಮಿ ಸಮರ್ಥ ಸಂಪ್ರದಾಯದ ವಿಸ್ತಾರ ಬಹಳ ದೊಡ್ಡ ಪ್ರಮಾಣದಲ್ಲಾಗಿದೆ. ಇದರಲ್ಲಿ ಮುಖ್ಯ ಶಿಷ್ಯರು ಶ್ರೀ ಯಶವಂತ ಮಹಾರಾಜ ದೇವಮಾಮಲೇದಾರ, ಕೊಲ್ಹಾಪುರದ ಕುಂಭಾರ ಸ್ವಾಮಿ, ಪುಣೆಯ ಬಿಡಕರ ಮಹಾರಾಜರು, ಮುಂಬಯಿಯ ಶ್ರೀತಾತ ಮಹಾರಾಜರು, ಆಳಂದಿಯ ಶ್ರೀನೃಸಿಂಹಸರಸ್ವತಿ, ಶ್ರೀ ಶಂಕರ ಮಹಾರಾಜ, ಶ್ರೀವಾಮನಬುವಾ, ಶ್ರೀ ಗುಲಾಬರಾವ್‌ ಮಹಾರಾಜ, ಶ್ರೀ ಕೇಳಕರಬುವಾ, ಶ್ರೀ ಸ್ವಾಮಿಸುತ, ಶ್ರೀ ಆನಂದಭಾರತಿ, ಶ್ರೀ ಗಜಾನನ ಮಹಾರಾಜ, ಶ್ರೀ ಮೊರೆದಾದಾ, ಶ್ರೀ ಆನಂದನಾಥ ಮಹಾರಾಜರಿದ್ದಾರೆ. ಈ ಶಿಷ್ಯರು ವಿವಿಧ ಸ್ಥಳಗಳಲ್ಲಿ ಶ್ರೀ ಸ್ವಾಮಿ ಸಮರ್ಥರ ಮಠಗಳನ್ನು ಸ್ಥಾಪಿಸಿದ್ದಾರೆ, ಹಾಗೆಯೇ ಶ್ರೀಸ್ವಾಮಿಗಳ ದೇವಸ್ಥಾನಗಳನ್ನು ಮತ್ತು ಸೇವಾಕೇಂದ್ರಗಳನ್ನು ಆರಂಭಿಸಿದ್ದಾರೆ.

– ಶ್ರೀ. ಅಶೋಕ ಕುಲಕರ್ಣಿ
(ಆಧಾರ : ಮಾಸಿಕ ‘ಗುರುತತ್ತ್ವ (ಏಕ ಮಾರ್ಗದರ್ಶಕ)’, ಮೇ ೨೦೧೭)