ದುಬೈನಲ್ಲಿ ಮಹಾದೇವ ಬೆಟ್ಟಿಂಗ ಆಪ್ ಮಾಲೀಕ ರವಿ ಉಪ್ಪಲ ಬಂಧನ. 

ನವದೆಹಲಿ – ‘ಮಹಾದೇವ ಬೆಟ್ಟಿಂಗ ಆಪ್’ ಮಾಲೀಕ ರವಿ ಉಪ್ಪಲನನ್ನು ದುಬೈನಲ್ಲಿ ಬಂಧಿಸಲಾಗಿದೆ. ಆತನ ವಿರುದ್ಧ ಇಂಟರ್‌ಪೋಲ್ ಪೊಲೀಸರು ‘ರೆಡ್ ಕಾರ್ನರ್’ ನೋಟಿಸ್ (ವಿಶ್ವದಾದ್ಯಂತ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಕಾಗಿರುವ ಪರಾರಿಯಾಗಿರುವವರ ಬಗ್ಗೆ ಜಾಗೃತಗೊಳಿಸುವುದು) ನೀಡಿದ್ದರು. ಇದರ ಆಧಾರದ ಮೇಲೆ ದುಬೈ ಪೊಲೀಸರು ರವಿ ಉಪ್ಪಲನನ್ನು ಬಂಧಿಸಿದ್ದಾರೆ. ಅವನನ್ನು ಭಾರತಕ್ಕೆ ಕರೆತರಲು ಭಾರತ ಸರಕಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಂಪರ್ಕದಲ್ಲಿವೆ. ಸೌರವ ಚಂದ್ರಾಕರ ಮತ್ತು ರವಿ ಉಪ್ಪಲ ಬೆಟ್ಟಿಂಗ ಆಪ್ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಜಾರಿ ನಿರ್ದೇಶನಾಲಯವು (‘ಇಡಿ’) ಇಬ್ಬರನ್ನೂ ಶೋಧಿಸುತ್ತಿತ್ತು.

ಸೌರವ್ ಚಂದ್ರಾಕರ ರಾಯಪುರದಲ್ಲಿ ಒಂದು ಜ್ಯೂಸ್ ಸೆಂಟರ್ ನಡೆಸುತ್ತಿದ್ದನು. ತದನಂತರ ಅವನು ಜೂಜಾಟದಲ್ಲಿ ತೊಡಗಿದ್ದನು. ಸೌರವ್ ಮತ್ತು ರವಿ ಇಬ್ಬರೂ 6 ಸಾವಿರ ಕೋಟಿಗಿಂತ ಅಧಿಕ ಸಂಪತ್ತು ಹೊಂದಿರುವ ಸಂಶಯವಿದೆ. ಹವಾಲಾ ಮೂಲಕ ಹಣವನ್ನು ದುಬೈಗೆ ಕಳುಹಿಸಿರಬೇಕು. ತನಿಖಾ ಸಂಸ್ಥೆಗಳು ದಾವೂದ್ ಇಬ್ರಾಹಿಂ ಗುಂಪು ದುಬೈನಿಂದ ‘ಮಹಾದೇವ ಆ್ಯಪ್’ ನಡೆಸಲು ಸಹಾಯ ಮಾಡಿರುವ ಸಂಶಯವನ್ನು ವ್ಯಕ್ತಪಡಿಸಿವೆ.

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಇವರ ಮೇಲೆ ಈ ಪ್ರಕರಣದ ಆರೋಪ

ಮಹದೇವ ಆಪ್ ಪ್ರಕರಣದಲ್ಲಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪೇಶ್ ಬಘೇಲ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಛತ್ತೀಸ್‌ಗಢ ವಿಧಾನಸಭೆಯ ವೇಳೆ 5 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಇಡಿ ಅಸೀಮ್ ದಾಸ್ ನನ್ನು ಬಂಧಿಸಿತ್ತು. ಈ ಮೊತ್ತವನ್ನು ಛತ್ತೀಸ್‌ಗಢ ವಿಧಾನಸಭಾ ಚುನಾವಣಾ ವೆಚ್ಚಕ್ಕಾಗಿ ಒಯ್ಯಲಾಗುತ್ತಿತ್ತು ಎಂದು ಅಸೀಮ್ ದಾಸ್ ಒಪ್ಪಿಕೊಂಡಿದ್ದಾನೆ. ಈ ಮೊತ್ತವನ್ನು ‘ಬಘೇಲ್’ ಹೆಸರಿನ ನಾಯಕನಿಗೆ ನೀಡಲು ತೆಗೆದುಕೊಂಡು ಹೋಗಲಾಗುತ್ತಿತ್ತು.

ಮಹದೇವ ಬೆಟ್ಟಿಂಗ ಆಪ್ ಎಂದರೇನು? 

ಮಹಾದೇವ ಬೆಟ್ಟಿಂಗ ಅಪ್ಲಿಕೇಶನ ಜೂಜಾಟದ ಆಪ್ ಆಗಿದೆ. ಜನರು ಆನ್‌ಲೈನ್‌ನಲ್ಲಿ ಜೂಜಾಟ ನಡೆಸುತ್ತಿದ್ದರು. ಈ ಆಪ್ ಅನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ; ಆದರೆ ಈ ಆಪ್ ಮಾತ್ರ ಇನ್ನೂ ಇತರ ದೇಶಗಳಲ್ಲಿ ಚಾಲನೆಯಲ್ಲಿದೆ. ಪೋಕರ್, ಕಾರ್ಡ್ ಆಟಗಳು, ಅವಕಾಶದ ಆಟಗಳು, ಕ್ರಿಕೆಟ್, ಟೆನಿಸ್, ಫುಟ್‌ಬಾಲ್‌ನಂತಹ ಲೈವ್ ಕ್ರೀಡೆಗಳಲ್ಲಿ ಬೆಟ್ಟಿಂಗ್ ಮಾಡಲು ಈ ಆಪ್ ಅನ್ನು ಬಳಸಲಾಗುತ್ತದೆ. ಡ್ರ್ಯಾಗನ್ ಟೈಗರ್, ಕಾರ್ಡ್‌ಗಳನ್ನು ಬಳಸಿಕೊಂಡು ಭಾರತದಲ್ಲಿ ವರ್ಚುವಲ್ ಕ್ರಿಕೆಟ್ ಆಟಗಳನ್ನು ಅಥವಾ ಭಾರತದಲ್ಲಿ ನಡೆಯುವ ಚುನಾವಣೆಗಳ ಮೇಲೆಯೂ ಜೂಜಾಟ ನಡೆಸಲು ಈ ಆಪ್ ಅವಕಾಶವನ್ನು ನೀಡುತ್ತದೆ.